ಕೆಲವು ಪ್ರಗತಿಪರ ಚಿಂತಕರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ

 

ಬೆಂಗಳೂರು, ಜೂ.7-ವಿಶೇಷ ತನಿಖಾ ತಂಡ(ಎಸ್‍ಐಟಿ)ದ ವಶದಲ್ಲಿರುವ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇನ್ನು ಕೆಲವು ಪ್ರಗತಿಪರ ಚಿಂತಕರನ್ನು ಹತ್ಯೆ ಮಾಡಲು ಸಂಚು ರೂಪಿಸಿರುವುದನ್ನು ತನಿಖಾ ವೇಳೆ ಬಹಿರಂಗಪಡಿಸಿದ್ದಾರೆ.
ಪ್ರಗತಿಪರ ಚಿಂತಕರಾದ ಗಿರೀಶ್ ಕಾರ್ನಾಡ್, ಚಂದ್ರಶೇಖರ್ ಪಾಟೀಲ್ (ಚಂಪಾ ), ಎಸ್.ಕೆ.ಭಗವಾನ್, ಬರಗೂರು ರಾಮಚಂದ್ರಪ್ಪ , ಮಾಜಿ ಸಚಿವೆ ಬಿ.ಟಿ.ಲಲಿತ ನಾಯಕ್ ಸೇರಿದಂತೆ ಒಟ್ಟು 6 ಮಂದಿಯನ್ನು ಹತ್ಯೆ ಮಾಡಲು ಈ ಆರೋಪಿ ಸಂಚು ರೂಪಿಸಿದ್ದ.
ಪುಣೆಯ ಕಲ್ಯಾಣನಗರ ನಿವಾಸಿಯಾದ ಅಮೂಲ್ ಕಾಳೆ ಸದ್ಯಕ್ಕೆ ಎಸ್‍ಐಟಿ ವಶದಲ್ಲಿದ್ದು , ಆತನ ಮನೆಯಿಂದ ವಶಪಡಿಸಿಕೊಂಡಿರುವ ಡೈರಿಯಲ್ಲಿ ಈ ಸ್ಪೋಟಕ ಮಾಹಿತಿಗಳು ಬಹಿರಂಗಗೊಂಡಿವೆ.

ಗೌರಿ ಹಿಂದೂ ಧರ್ಮ ವಿರೋಧಿ:
ಪತ್ರಕರ್ತೆ ಗೌರಿ ಲಂಕೇಶ್ ಹಿಂದು ಧರ್ಮ, ಹಿಂದು ದೇವರು, ಹಿಂದು ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದರಿಂದಲೇ ಅವರನ್ನು ಹತ್ಯೆ ಮಾಡಬೇಕಾಯಿತು ಎಂದು ಎಸ್‍ಐಟಿ ವಶದಲ್ಲಿರುವ ಅಮೂಲ್ ಕಾಳೆ, ಪ್ರವೀಣ್ ಕುಮಾರ್ ಹೇಳಿಕೆ ನೀಡಿದ್ದಾರೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಪ್ರತಿ ಹಂತದಲ್ಲೂ ಗೌರಿ ಲಂಕೇಶ್ ಹಿಂದೂ ಧರ್ಮವನ್ನೇ ಗುರಿಯಾಗಿಟ್ಟುಕೊಂಡು ಟೀಕೆ ಮಾಡುತ್ತಿದ್ದರು. ನಮ್ಮ ಧರ್ಮಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು. ಇದಕ್ಕಾಗಿ ಕಳೆದ ಒಂದು ವರ್ಷದಿಂದ ನಾವು ತಯಾರಿ ನಡೆಸಿದ್ದೆವು ಎಂದು ಬಾಯ್ಬಿಟ್ಟಿದ್ದಾನೆ.
ಹತ್ಯೆಯಲ್ಲಿ ಸಾಮ್ಯತೆ:
ಇನ್ನು ಧಾರವಾಡದಲ್ಲಿ ಭೀಕರವಾಗಿ ಹತ್ಯೆಗೀಡಾದ ಚಿಂತಕ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣದಲ್ಲೂ ಈ ಹಂತಕರ ಕೈವಾಡ ಇರುವ ಸಾಧ್ಯತೆಯನ್ನು ಎಸ್‍ಐಟಿ ತಂಡ ಶಂಕೆ ವ್ಯಕ್ತಪಡಿಸಿದೆ.
ಮೇಲ್ನೋಟಕ್ಕೆ ಗೌರಿ ಲಂಕೇಶ್, ಎಂ.ಎ.ಕಲ್ಬುರ್ಗಿ, ಗೋವಿಂದ್ ಪನ್ಸಾರೆ , ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣಗಳಲ್ಲಿ ಒಂದಕ್ಕೊಂದು ಸಾಮ್ಯತೆ ಕಂಡುಬರುತ್ತಿದೆ. ಆರೋಪಿಗಳು ಇವರನ್ನು ಹಣೆಗೆ ಗುಂಡಿಟ್ಟು ಕೊಲೆ ಮಾಡಿದ್ದರು.
ಇನ್ನೊಂದು ಮೂಲಗಳ ಪ್ರಕಾರ ಎಸ್‍ಐಟಿ ವಶದಲ್ಲಿರುವ ಶಂಕಿತ ಆರೋಪಿಗಳು ಸಾಹಿತಿ ಎಂ.ಎಂ.ಕಲ್ಬುರ್ಗಿ ಮನೆಗೆ ಅನೇಕ ಬಾರಿ ಭೇಟಿ ನೀಡಿದ್ದರು ಎನ್ನಲಾಗಿದೆ.
ಕಲ್ಬುರ್ಗಿ ಅವರ ಪತ್ನಿ ಉಮಾದೇವಿ ಹಾಗೂ ಅವರ ಮಕ್ಕಳು ನೀಡಿರುವ ಹೇಳಿಕೆ ಪ್ರಕಾರ ಪ್ರವೀಣ್‍ಕುಮಾರ್, ಅಮೂಲ್ ಕಾಳೆ ಹಲವಾರು ಬಾರಿ ಮನೆಯ ಅಕ್ಕಪಕ್ಕ ಸುಳಿದಾಡಿದ್ದರು ಎಂದು ಸಿಐಡಿ ಮುಂದೆ ಹೇಳಿಕೆ ನೀಡಿದ್ದಾರೆ.
ಇವರ ಮುಖ ಚರ್ಯೆಗಳನ್ನು ಗಮನಿಸಿದಾಗ ಎಂ.ಎಂ.ಕಲ್ಬುರ್ಗಿ ಕುಟುಂಬದವರು ಅನೇಕ ಬಾರಿ ಕೆಲವು ಸಂದರ್ಭಗಳಲ್ಲಿ ಮನೆ ಹತ್ತಿರ ಸುಳಿದಾಡಿರುವುದನ್ನು ಖಚಿತ ಪಡೆಸಿದ್ದಾರೆ.
ಹೀಗಾಗಿ ಕಲ್ಬುರ್ಗಿ ಹತ್ಯೆಯಲ್ಲೂ ಇವರ ಕೈವಾಡ ಇದೆಯೇ ಎಂಬುದನ್ನು ಎಸ್‍ಐಟಿ ಮತ್ತು ಸಿಐಡಿ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ