ಆರೋಗ್ಯ ಯೋಜನೆಯ ವಿವಿಧ ಫಲಾನುಭವಿಗಳ ಜತೆ ಪ್ರಧಾನಿ ಮೋದಿ ಸಂವಾದ

ನವದೆಹಲಿ:ಜೂ-7: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆರೋಗ್ಯ ಯೋಜನೆಯ ವಿವಿಧ ಫಲಾನುಭವಿಗಳ ಜತೆ ಸಂವಾದ ನಡೆಸಿದ ಪ್ರಧಾನಿ ಮೋದಿ ಅನಾರೋಗ್ಯವು ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ ಅಪಾರ ಆರ್ಥಿಕ ಹೊರೆಯಾಗಿದೆ ಎಂದು ಹೇಳಿದರು.

ಒಡಿಶಾ, ಗುಜರಾತ್, ಆಂಧ್ರಪ್ರದೇಶ, ಉತ್ತರ ಪ್ರದೇಶದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪ್ರಯೋಜನ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು. ನಮೋ ಆ್ಯಪ್‌ ಮೂಲಕ ಈ ರಾಜ್ಯಗಳ ಜನರ ಜತೆ ಸಂವಾದ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆರೋಗ್ಯಕರ ಭಾರತ ನಿರ್ಮಾಣ ಮಾಡುವಲ್ಲಿ ಸ್ವಚ್ಚ ಭಾರತ್ ಮಿಷನ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಜನರಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸಲು ಹಾಗೂ ಪ್ರತಿಯೊಬ್ಬ ಬಾರತೀಯರಿಗೆ ಉತ್ತಮ ಆರೋಗ್ಯದ ಕಾಳಜಿಯನ್ನು ಖಾತ್ರಿಪಡಿಸುವುದು ಸರ್ಕಾರದ ಉದ್ದೇಶ. ಇದಕ್ಕಾಗಿ ನಿರಂತರ ಪ್ರಯತ್ನ ನಡೆದಿದೆ. ದೇಶದ ಪ್ರತಿಯೊಬ್ಬ ನಾಗರಿಕ ಉತ್ತಮ ಆರೋಗ್ಯದಿಂದ ಬದುಕಬೇಕು, ಆರೋಗ್ಯಯುತ ಭಾರತವೇ ಸ್ವಚ್ಛ ಭಾರತದ ಯೋಜನೆಯ ಉದ್ದೇಶ ಎಂದು ಪ್ರಧಾನಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ಸ್ಟೆಂಟ್‌ಗಳ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಇದು ಬಡ ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚು ಸಹಾಯ ವಾಗಿದೆ ಎಂದರು. ಬಡವರು ಕಡಿಮೆ ಬೆಲೆಗೆ ಔಷಧಗಳನ್ನು ಪಡೆಲು ನೆರವಾಗುವಂತೆ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಿಂದಾಗಿ ಬಾರತದಾದ್ಯಂತ ಸಾಕಷ್ಟು ಜನ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

ಪ್ರಧಾನಿ ಜತೆ ಸಂವಾದ ನಡೆಸಿದ ಒಡಿಶಾದ ಸುಭಾಷ್‌ ಮೊಹಂತಿ, ನಾನು ರಕ್ತದೊತ್ತಡ, ಮಧುಮೇಹ ಮತ್ತು ಹೆಚ್ಚಿನ ಕೊಬ್ಬಿನಾಂಶ ಸಂಗ್ರಹ ಸಮಸ್ಯೆ ವಿರುದ್ಧ ಹೋರಾಡುತ್ತಿದ್ದೇನೆ. ಪ್ರಧಾನಮಂತ್ರಿ ಜನೌಷಧಿ ಯೋಜನೆ ಪರಿಣಾಮ ನಾನು ಕಡಿಮೆ ದರದಲ್ಲಿ ಔಷಧಿ ಖರೀದಿಸುವಂತಾಗಿದೆ. ಈ ಮೊದಲು ನಾನು ತಿಂಗಳೊಂದಕ್ಕೆ 3 ಸಾವಿರ ವೆಚ್ಚ ಮಾಡುತ್ತಿದ್ದೆ. ಇದೀಗ, ಅದರ ವೆಚ್ಚ 400ಕ್ಕೆ ಇಳಿದೆ ಎಂದು ಹೇಳಿದ್ದಾರೆ.

ಐದು ತಿಂಗಳ ಹಿಂದೆ ನಾನು ಅಧಿಕ ಕೊಬ್ಬು ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಎದುರಿಸಿದ್ದೇನೆ. ಚಿಕಿತ್ಸೆಗಾಗಿ ಪ್ರತಿ ಹತ್ತು ದಿನಗಳಲ್ಲಿ ನಾನು 1 ಸಾವಿರ ವೆಚ್ಚ ಮಾಡುತ್ತಿದ್ದೆ. ಆದರೆ, ಜನೌಷಧಿ ಯೋಜನೆಯಿಂದಾಗಿ ಆ ವೆಚ್ಚ 200ಕ್ಕೆ ತಗ್ಗಿದೆ ಎಂದು ಹೈದರಾಬಾದ್‌ನಿಂದ ಮಾತನಾಡಿದ ಮಾಲಾ ಎಂಬುವರು ಹೇಳಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ