ಪರಿಸರ ದಿನಕ್ಕೆ ತಮಿಳುನಾಡು ಸರ್ಕಾರದ ಗಿಫ್ಟ್, ಜ.1, 2019ರಿಂದ ಪ್ಲಾಸ್ಟಿಕ್ ನಿಷೇಧ!

ಚೆನ್ನೈ: ವಿಶ್ವ ಪರಿಸರ ದಿನದಂದು ತಮಿಳುನಾಡು ಸರ್ಕಾರ ಹೊಸ ಉಡುಗೊರೆ ನೀಡಿದ್ದು, ಜನವರಿ 1, 2019ರಿಂದ ರಾಜ್ಯದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಮಾಡಿದೆ.
ಪರಿಸರ ಸಂರಕ್ಷಣೆ ಮತ್ತು ಮುಂದಿನ ತಲೆಮಾರಿಗೆ ಪ್ಲಾಸ್ಟಿಕ್ ರಹಿತ ಪರಿಸರ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗುತ್ತಿದೆ ಎಂದು ಮಂಗಳವಾರ ಸಿಎಂ ಪಳನಿಸ್ವಾಮಿ ಘೋಷಣೆ ಮಾಡಿದರು.
ಇಂದು ತಮಿಳುನಾಡು ವಿದಾನಸಭೆಯಲ್ಲಿ ಸಿಎಂ ಪಳನಿ ಸ್ವಾಮಿ ಈ ಘೋಷಣೆ ಮಾಡಿದ್ದು, ಸಾಂಪ್ರದಾಯಿಕ ನೈಸರ್ಗಿಕ ವಸ್ತುಗಳನ್ನು ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಬಳಕೆ ಮಾಡಲು ಉತ್ತೇಜನ ನೀಡಲಾಗುತ್ತದೆ ಎಂದು ಹೇಳಿದರು. ಅಂತೆಯೇ ಪ್ಲಾಸ್ಟಿಕ್ ತಟ್ಟೆ. ಕವರ್, ಗ್ಲಾಸ್ ಗಳಿಗೆ ಪರ್ಯಾಯವಾಗಿ, ಪೇಪರ್ ಬ್ಯಾಗ್, ತಾಳೆ, ಅಡಿಕೆ, ಮುತ್ತುಗದ ಎಲೆಗಳಿಂದ ತಟ್ಟೆಗಳನ್ನು, ಪೇಪರ್ ನಿಂದ ಗ್ಲಾಸ್ ಗಳನ್ನು ತಯಾರಿಸಿ ಬಳಕೆ ಮಾಡಬಹುದು ಎಂದು ಪಳನಿ ಸ್ವಾಮಿ ಸದನಕ್ಕೆ ಮಾಹಿತಿ ನೀಡಿದರು.
ಜೈವಿಕ ಅಲ್ಲದ ವಸ್ತುಗಳು, ಪ್ರಮುಖವಾಗಿ ಪ್ಲಾಸ್ಟಿಕ್ ಅಥವಾ ಪಾಲಿಥಿನ್ ಕವರ್ ಗಳಿಂದಾಗಿ ಪರಿಸರಕ್ಕೆ ಹಾನಿಯಾಗುತ್ತಿದ್ದು, ನೀರಿನ ಹರಿವಿನ ಮೇಲೆ ಇದು ಅಡ್ಡ ಪರಿಣಾಮ ಬೀರುತ್ತಿದೆ. ಪ್ಲಾಸ್ಟಿಕ್ ಸುಡುವುದರಿಂದಲೂ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಗಾಳಿ, ನೀರು, ಭೂಮಿಯನ್ನು ಪ್ಲಾಸ್ಟಿಕ್ ಕಲುಷಿತಗೊಳಿಸುತ್ತಿದೆ. ಹೀಗಾಗಿ ರಾಜ್ಯದಲ್ಲಿ ನೂತನ ವರ್ಷಾರಂಭದಿಂದ ಪ್ಲಾಸ್ಟಿಕ್ ನಿಷೇಧಿಸಲಾಗುತ್ತಿದೆ. ಈ ಹಿಂದೆ ಮಾಜಿ ಸಿಎಂ ಜೆ ಜಯಲಲಿತಾ ಅವರೂ ಕೂಡ ಜೈವಿಕ ಅಲ್ಲದ ವಸ್ತುಗಳಾದ ಪಾಲಿಥಿನ್ ಕವರ್ ಮತ್ತು ಪ್ಲಾಸ್ಟಿಕ್ ನಿಷೇಧಿಸುವ ಕುರಿತು ಚಿಂತನೆ ನಡೆಸಿದ್ದರು ಎಂದು ಪಳನಿ ಸ್ವಾಮಿ ಹೇಳಿದರು.
ಅಗತ್ಯ ವಸ್ತುಗಳಿಗೆ ಮಾತ್ರ ವಿನಾಯಿತಿ
ಇನ್ನು ಹಾಲು, ಮೊಸರು, ತುಪ್ಪ, ಎಣ್ಣೆಯಂತಹ ಅಗತ್ಯ ವಸ್ತುಗಳಿಗೆ ಪ್ಲಾಸ್ಟಿಕ್ ನಿಷೇಧದಿಂದ ವಿನಾಯಿತಿ ನೀಡುವುದಾಗಿ ಅವರು ಹೇಳಿದರು. ಇದನ್ನು ಹೊರತು ಪಡಿಸಿ ಕಾನೂನು ಮೀರಿದರೆ ಅಂತಹವರಿಗೆ ಕಠಿಣ ಶಿಕ್ಷೆ ಮತ್ತು ಭಾರಿ ಪ್ರಮಾಣದ ದಂಡ ವಿಧಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಇ ಪಳನಿಸ್ವಾಮಿ ವಿವರ ನೀಡಿದರು.
ಈ ಹಿಂದೆ ತಮಿಳುನಾಡಿನಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧದ ಕುರಿತು ಮಾಜಿ ಸಿಎಂ ದಿವಂಗತ ಜೆ ಜಯಲಲಿತಾ ಅವರು ಪ್ರಸ್ತಾಪ ಮಾಡಿದ್ದರು. ಅಲ್ಲದೆ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡುವ ಸಂಬಂಧ ಸಮಿತಿಯನ್ನು ಕೂಡ ರಚನೆ ಮಾಡಿದ್ದರು. ಸಮಿತಿಯು ಪ್ಲಾಸ್ಟಿಕ್ ಗೆ ಬದಲಾಗಿ ಸಾಂಪ್ರದಾಯಿಕ ಮರದ ಎಲೆಗಳನ್ನು, ಅಡಿಕೆ ಮರದ ಪಟ್ಟೆಯನ್ನು ತಟ್ಟೆಯಾಗಿ ಬಳಕೆ ಮಾಡಬಹುದು. ಪ್ಲಾಸ್ಟಿಕ್ ಗ್ಲಾಸ್ ಗಳಿಗೆ ಬದಲಾಗಿ ಇಕೋ ಫ್ರೆಂಡ್ಲಿ ಪೇಪರ್ ಗ್ಲಾಸ್ ಬಳಕೆ ಮಾಡಬಹುದು ಎಂದು ಶಿಫಾರಸ್ಸು ಮಾಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ