ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ನಡೆಸಿದ ಮುಖ್ಯಮಂತ್ರಿ

 

ಬೆಂಗಳೂರು, ಜೂ.4- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ನಡೆಸಿ ನೂರಾರು ಮಂದಿಯ ಸಮಸ್ಯೆಗಳನ್ನು ಆಲಿಸಿದರು.

ಕೊರಟಗೆರೆಯಿಂದ ಆಗಮಿಸಿದ ಆನಂದ್ ಮತ್ತು ಪ್ರೇಮಾ ಎಂಬ ದಂಪತಿ ತಮ್ಮ ಇಬ್ಬರೂ ಮಕ್ಕಳಿಗೆ ಮೂಳೆರೋಗದ ಸಮಸ್ಯೆ ಇದ್ದು, ಅವರಿಗೆ ಚಿಕಿತ್ಸೆ ಕೊಡಿಸಲು ತಲಾ 32 ಲಕ್ಷ ವೆಚ್ಚವಾಗುತ್ತದೆ ಎಂದು ಖಾಸಗಿ ಆಸ್ಪತ್ರೆಯವರು ಹೇಳುತ್ತಿದ್ದಾರೆ. ಆಟೋ ಓಡಿಸಿ ಜೀವನ ನಡೆಸುತ್ತಿರುವ ನಮಗೆ ಅಷ್ಟು ಹಣ ಭರಿಸಲು ಸಾಧ್ಯವಾಗುತ್ತಿಲ್ಲ. ಕೊರಟಗೆರೆ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಆಗಮಿಸಿದ ನಿಮ್ಮನ್ನು ಭೇಟಿ ಮಾಡಿ ನಾವು ಮನವಿ ಮಾಡಿದ್ದೆವು. ಆ ಸಂದರ್ಭದಲ್ಲಿ ನೀವು ಸಹಾಯ ಮಾಡುವ ಭರವಸೆ ನೀಡಿದ್ರಿ. ಅದರಂತೆ ನಿಮ್ಮನ್ನು ಭೇಟಿ ಮಾಡಲು ಈಗ ಬಂದಿದ್ದೇವೆ ಎಂದರು.
ಐದು ವರ್ಷದ ಮತ್ತು 10 ವರ್ಷದ ಇಬ್ಬರು ಮಕ್ಕಳ ಸಮಸ್ಯೆ ಆಲಿಸಿದ ಕುಮಾರಸ್ವಾಮಿ ಅವರು, ತಕ್ಷಣವೇ ಸಂಜಯ್‍ಗಾಂಧಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು. ತಾವು ಆಸ್ಪತ್ರೆ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನ ನೀಡುವುದಾಗಿ ಕುಮಾರಸ್ವಾಮಿ ಹೇಳಿದರು.

ಬೆಂಗಳೂರಿನ ತಿಂಡ್ಲು ವಿನಲ್ಲಿ ವಾಸ ಮಾಡುತ್ತಿರುವ ಅಂಧ ಮಹಿಳೆಯೊಬ್ಬರು ತಮ್ಮ ಪುತ್ರನೊಂದಿಗೆ ಇಂದು ಸಿಎಂ ಭೇಟಿ ಮಾಡಿ ತಮ್ಮ ಪತಿ ಎಲೆಕ್ಟ್ರಿಷನ್ ವೃತ್ತಿ ಮಾಡುತ್ತಿದ್ದಾರೆ. ಒಂದು ದಿನ ಕೆಲಸ ಸಿಕ್ಕರೆ ಎರಡು ದಿನ ಇರುವುದಿಲ್ಲ. ಜೀವನ ನಿರ್ವಹಣೆ ಕಷ್ಟವಾಗಿದೆ ಸಹಾಯ ಮಾಡಿ ಎಂದು ಮನವಿ ಮಾಡಿದರು. ಅವರಿಗೆ ಕುಮಾರಸ್ವಾಮಿ ಅವರು ಆರ್ಥಿಕವಾಗಿ ಸಹಾಯ ಮಾಡಿದರು.
ಇದೇ ವೇಳೆ ಮಹಿಳೆಯ ಪುತ್ರ ಯಶವಂತ್‍ಗೆ ಇಂದು ಹುಟ್ಟುಹಬ್ಬದ ದಿನವಾಗಿತ್ತು. ಬಾಲಕ ಯಶವಂತ್, ನಿಮಗೆ ಚಾಕೊಲೆಟ್ ತರುವುದನ್ನು ಮರೆತೆ ಎಂದು ವಿಷಾದ ವ್ಯಕ್ತಪಡಿಸಿ, ನಿಮ್ಮನ್ನು ತಬ್ಬಿಕೊಳ್ಳಬೇಕು ಎನ್ನಿಸುತ್ತಿದೆ ಎಂದು ಹೇಳಿದಾಗ ಕುಮಾರಸ್ವಾಮಿ ಅವರು ಬಾಲಕನನ್ನು ಆತ್ಮೀಯವಾಗಿ ಅಪ್ಪಿಕೊಂಡು ಆಶೀರ್ವದಿಸಿದರು.

ಉಲ್ಲಾಳ ಉಪನಗರದ ಅಂಬೇಡ್ಕರ್ ನಗರದ ನಿವಾಸಿ ಗಂಗಮ್ಮ ಅವರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ನನ್ನದು 3/40 ನಿವೇಶನ ಇದೆ. ಆದರೆ, ಅಕ್ಕಪಕ್ಕದಲ್ಲಿ ಬಲಾಢ್ಯರು 4ಅಡಿ, 8 ಅಡಿ ಒತ್ತುವರಿ ಮಾಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಬಂದಿದೆ. ಸಾಧ್ಯವಾಗಲಿಲ್ಲ. ಕೆಲವರ ಸಲಹೆಗಳ ಮೇಲೆ ನಾನು ನ್ಯಾಯಾಲಯದ ಮೊರೆ ಹೋಗಿದ್ದೆ. ನ್ಯಾಯಾಲಯವು ನನ್ನ ಪರವಾಗಿ ತೀರ್ಪು ನೀಡಿದೆ. ಆದರೆ, ತಹಸೀಲ್ದಾರ್ ಸ್ಥಳಕ್ಕೆ ಬಂದು ಒತ್ತುವರಿಯನ್ನು ತೆರವುಗೊಳಿಸಿ ನನಗೆ ಸಹಾಯ ಮಾಡುತ್ತಿಲ್ಲ ಎಂದು ದೂರಿದರು.
ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಅಧಿಕೃತ ಕಾವೇರಿಯಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರಿಬ್ಬರು ಇಂದು ಹಾಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ನಾವು ಗುತ್ತಿಗೆ ಆಧಾರವಾಗಿ ಕೆಲಸ ಮಾಡುತ್ತಿದ್ದೇವೆ. 9 ತಿಂಗಳಿನಿಂದ ವೇತನ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅತ್ಯಂತ ತಾಳ್ಮೆಯಿಂದ ಸಾರ್ವಜನಿಕರ ಸಮಸ್ಯೆಗಳನ್ನು ಹಾಲಿಸಿದರು. ಪ್ರತಿಯೊಬ್ಬರ ಸಮಸ್ಯೆಗೂ ಕಾನೂನು ಚೌಕಟ್ಟಿನಲ್ಲಿ ಪರಿಹಾರ ಕೊಡಿಸುವ ಪ್ರಯತ್ನ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ