ಒಂದು ವಾರ ರಾಜ್ಯದೆಲ್ಲೆಡೆ ಉತ್ತಮ ಮಳೆ: ಇನ್ನೊಂದು ವಾರದಲ್ಲಿ ರಾಜ್ಯಾದ್ಯಂತ ವ್ಯಾಪಿಸಲಿದೆ ಮುಂಗಾರು ಮಳೆ

 

ಬೆಂಗಳೂರು, ಜೂ.3- ನೈಋತ್ಯ ಮುಂಗಾರು ರಾಜ್ಯ ಪ್ರವೇಶಿಸಿದ ಬೆನ್ನಲ್ಲೇ ಉತ್ತಮ ಮಳೆಯಾಗುತ್ತಿದ್ದು, ಇನ್ನೂ ಒಂದು ವಾರ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೊಂದು ವಾರದಲ್ಲಿ ಮುಂಗಾರು ಮಳೆ ರಾಜ್ಯಾದ್ಯಂತ ವ್ಯಾಪಿಸುವ ಮುನ್ಸೂಚನೆಗಳು ಕಂಡುಬಂದಿವೆ.

ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರದಲ್ಲಿನ ವ್ಯತ್ಯಾಸದಿಂದಾಗಿ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ನಿನ್ನೆ ಧಾರವಾಡದಲ್ಲಿ ಭಾರೀ ಮಳೆಯಾಗಿದ್ದು, 101 ಮಿ.ಮೀ.ನಷ್ಟು ಮಳೆಯಾದ ವರದಿಯಾಗಿದೆ. ರಾಜ್ಯದ ದಕ್ಷಿಣ ಒಳನಾಡು, ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಕಳೆದ ಜನವರಿಯಿಂದ ಮೇ ಅಂತ್ಯದವರೆಗೆ ವಾಡಿಕೆ ಮಳೆ ಪ್ರಮಾಣ 133 ಮಿ.ಮೀ.ನಷ್ಟಿದ್ದು, 200 ಮಿ.ಮೀ.ನಷ್ಟು ಮಳೆಯಾಗಿದೆ. ಒಟ್ಟಾರೆ ಶೇ.50ರಷ್ಟು ಹೆಚ್ಚು ಮಳೆಯಾಗಿದೆ.

ಮೇ ಕೊನೆ ವಾರದಲ್ಲೂ ವಾಡಿಕೆಗಿಂತ ಶೇ.70ರಷ್ಟು ಮಳೆಯಾಗಿದೆ. ಅಲ್ಲದೆ, ಬೇಸಿಗೆ ಅವಧಿಯ ಮಾರ್ಚ್‍ನಿಂದ ಮೇ ಅಂತ್ಯದವರೆಗೆ ರಾಜ್ಯಾದ್ಯಂತ 125ಮಿ.ಮೀ.ನಷ್ಟು ವಾಡಿಕೆ ಮಳೆಯಾಗುತ್ತಿತ್ತು. ಆದರೆ, 193 ಮಿ.ಮೀ.ನಷ್ಟು ಮಳೆಯಾಗಿದ್ದು, ಶೇ.54ರಷ್ಟು ಹೆಚ್ಚಾಗಿ ವರ್ಷಧಾರೆಯಾಗಿದೆ.
ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲೂ ಕಳೆದ ಐದು ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿರುವ ವರದಿಯಾಗಿದೆ.

ಕಳೆದ ಎರಡು-ಮೂರು ವಾರಗಳಿಂದ ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿದ್ದು, ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ.
ಹವಾ ಮುನ್ಸೂಚನೆ ಪ್ರಕಾರ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಸಂಜೆ ಹಾಗೂ ರಾತ್ರಿ ವೇಳೆ ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ