ಕಾಂಗ್ರೆಸ್ ಪಕ್ಷದ ಸರ್ಕಾರ ನೇಮಿಸಿದ್ದ ನಿಗಮ ಮಂಡಳಿ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಮುಂದಿನ ಲೋಕಸಭೆ ಚುನಾವಣೆವರೆಗೂ ಅಧಿಕಾರದಲ್ಲಿ ಮುಂದುವರೆಸಬೇಕೆಂಬ ಒತ್ತಡ

 

ಬೆಂಗಳೂರು, ಮೇ 30-ಕಾಂಗ್ರೆಸ್ ಪಕ್ಷದ ಸರ್ಕಾರ ನೇಮಿಸಿದ್ದ ನಿಗಮ ಮಂಡಳಿ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಮುಂದಿನ ಲೋಕಸಭೆ ಚುನಾವಣೆವರೆಗೂ ಅಧಿಕಾರದಲ್ಲಿ ಮುಂದುವರೆಸಬೇಕೆಂಬ ಒತ್ತಡ ಕೇಳಿ ಬಂದಿದೆ.
ನಗರದ ಖಾಸಗಿ ಹೊಟೇಲ್‍ನಲ್ಲಿಂದು ಸಭೆ ನಡೆಸಿದ ಸುಮಾರು 30ಕ್ಕೂ ಹೆಚ್ಚು ನಿಗಮ ಮಂಡಳಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಕಳೆದ ಮೂರು ದಿನಗಳ ಹಿಂದೆ ಮುಖ್ಯಮಂತ್ರಿ ಸಚಿವಾಲಯದಿಂದ ಹೊರಡಿಸಲಾದ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದರು.

ಬಿಜೆಪಿಯ ಯಡಿಯೂರಪ್ಪ ಅವರು ಮೂರು ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದಾಗ ಸಿದ್ಧಪಡಿಸಲಾದ ಆದೇಶವನ್ನೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜಾರಿಗೊಳಿಸಿದ್ದಾರೆ. ಯಡಿಯೂರಪ್ಪ ಅವರಿಗೆ ಕಾರ್ಯದರ್ಶಿಯಾಗಿದ್ದ ಅಧಿಕಾರಿಯಾಗಿದ್ದವರೇ ಕುಮಾರಸ್ವಾಮಿ ಅವರಿಗೂ ಕಾರ್ಯದರ್ಶಿಯಾಗಿದ್ದು, ತಪ್ಪು ಮಾಹಿತಿ ನೀಡಿ ಈ ರೀತಿಯ ಆದೇಶ ಜಾರಿಯಾಗಲು ಕಾರಣರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ಸಭೆ ನಡೆಸಿರುವುದು ಸರ್ಕಾರದ ವಿರುದ್ಧವಲ್ಲ. ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಮುಂಚೂಣಿಯಲ್ಲಿರಲಿ ಎಂಬುದು ನಮ್ಮೆಲ್ಲರ ಅಭಿಲಾಷೆ. ಆದರೆ ಅದೇ ಸಂದರ್ಭದಲ್ಲಿ ನಮ್ಮ ಹಕ್ಕನ್ನೂ ಕೇಳುತ್ತಿದ್ದೇವೆ. ಕಳೆದ 11 ತಿಂಗಳ ಹಿಂದಷ್ಟೇ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮನ್ನು ನೇಮಕ ಮಾಡಿದ್ದರು. ಅಲ್ಲದೆ ಮೂರು ತಿಂಗಳು ಚುನಾವಣಾ ಕೆಲಸಕ್ಕಾಗಿ ಓಡಾಡಿದ್ದೇವೆ. ಸುಮಾರು 80 ನಿಗಮ ಮಂಡಳಿಗಳ ಪೈಕಿ 40 ನಿಗಮ ಮಂಡಳಿಗಳು ಖಾಲಿಯಾಗಿವೆ. ಅವುಗಳಿಗೆ ನೇಮಕಾತಿ ಮಾಡಿಕೊಳ್ಳಲಿ. ಉಳಿದಂತೆ ನಮ್ಮನ್ನು ವಜಾಗೊಳಿಸುವುದು ಸರಿಯಲ್ಲ ಎಂದು ನಿಗಮವೊಂದರ ಅಧ್ಯಕ್ಷ ಕೆಂಚೇಗೌಡ ಅಭಿಪ್ರಾಯಪಟ್ಟರು.

ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿ ಸಮನ್ವಯ ಸಮಿತಿ ಸಭೆ ನಡೆಸಿ ಅನಂತರ ಖಾಲಿ ಇರುವ ವಿವಿಧ ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡಿಕೊಳ್ಳಲಿ. ಈಗಾಗಲೇ ಕೆಲಸ ಮಾಡುತ್ತಿರುವ ನಿಗಮ ಮಂಡಳಿ ಅಧ್ಯಕ್ಷರು-ಉಪಾಧ್ಯಕ್ಷರು-ಸದಸ್ಯರು ಅಧಿಕಾರದಲ್ಲಿ ಮುಂದುವರೆಯುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನಾಕ್ಕೆ ಹೆಚ್ಚಿನ ಆದ್ಯತೆ ನೀಡಿ ಕಾರ್ಯದ ಒತ್ತಡದಲ್ಲಿದ್ದಾರೆ. ಹಾಗಾಗಿ ಈವರೆಗೂ ಅವರನ್ನು ಭೇಟಿ ಮಾಡಿರಲಿಲ್ಲ. ಇಂದು ಅವರನ್ನು ಭೇಟಿ ಮಾಡುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಸಚಿವಾಲಯ ಹೊರಡಿಸಿರುವ ಆದೇಶ ನಮಗಿನ್ನು ತಲುಪಿಲ್ಲ. ಒಂದು ವೇಳೆ ಅಂತಹ ಆದೇಶ ಹೊರಡಿಸಿದ್ದರೆ ಅದನ್ನು ಹಿಂಪಡೆದು ನಮ್ಮನ್ನು ಅಧಿಕಾರದಲ್ಲಿ ಮುಂದುವರೆಸಬೇಕು ಎಂದು ಮನವಿ ಮಾಡಿದರು.
ಕವಿಕಾ ಅಧ್ಯಕ್ಷ ಮನೋಹರ್ ಮಾತನಾಡಿ, ನಿಗಮ ಮಂಡಳಿಗಳಿರುವುದು ಪಕ್ಷದ ಕಾರ್ಯಕರ್ತರಿಗೆ, ಶಾಸಕರಿಗಾಗಿ ಅಲ್ಲ. ಹಲವರು ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರ ಶ್ರಮದಿಂದ ಪಕ್ಷ ಅಧಿಕಾರದಲ್ಲಿ ಮುಂದುವರೆದಿದೆ. ಈ ಹಂತದಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ತೆರವುಗೊಳಿಸಬಾರದು ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ