ಜೂ.5ರಿಂದ ರಾಜ್ಯವ್ಯಾಪಿ ಒಂದು ಕೋಟಿ ಗಿಡ ನೆಡುವ ಅಭಿಯಾನ

Varta Mitra News

 

ಬೆಂಗಳೂರು, ಮೇ 28- ಸುಂದರ ನದಿವನಗಳ ನಾಡೇ… ನಿತ್ಯ ಹರಿದ್ವರ್ಣ ವನದ ತೇಗಗಂಧ ತರುಗಳ ನಾಡು ಎಂದು ಹಿರಿಯ ಕವಿಗಳಿಂದ ಕರೆಸಿಕೊಂಡಿದ್ದ ನಮ್ಮ ಕನ್ನಡ ನೆಲ ಇದೀಗ ಕಾರಣಾಂತರಗಳಿಂದ ಪ್ರಾಕೃತಿಕವಾಗಿ ಸೊರಗುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಈ ಹಿನ್ನೆಲೆಯಲ್ಲಿ ಸಮರ್ಥ ಭಾರತ ಸಂಸ್ಥೆಯು ಜೂ.5ರಿಂದ ಆ.15ರ ವರೆಗೂ ರಾಜ್ಯವ್ಯಾಪಿ ಒಂದು ಕೋಟಿ ಗಿಡ ನೆಡುವ ಎರಡನೆ ಹಂತದ ಅಭಿಯಾನ ಹಮ್ಮಿಕೊಂಡಿದೆ.
ರಾಜ್ಯದ ಸುಮಾರು 600ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಈ ಅಭಿಯಾನಕ್ಕೆ ಕೈ ಜೋಡಿಸಲಿವೆ. ರಾಜ್ಯಾದ್ಯಂತ ಒಂದು ಕೋಟಿಗೂ ಅಧಿಕ ಗಿಡ ನೆಡುವ ಪ್ರಕ್ರಿಯೆಗೆ ಈಗಾಗಲೇ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆಗಳು ಗಿಡಗಳನ್ನು ನೀಡುವುದಾಗಿ ಭರವಸೆ ನೀಡಿವೆ.

ಅಲ್ಲದೆ, ಅನೇಕ ಸಂಘ-ಸಂಸ್ಥೆಗಳು 30 ಲಕ್ಷಕ್ಕೂ ಹೆಚ್ಚು ಉಳಿದ ಸೀಡ್‍ಬಾಲ್‍ಗಳನ್ನು ತಯಾರು ಮಾಡಿವೆ. ಶಾಲಾ-ಕಾಲೇಜುಗಳು, ಸಂಘ-ಸಂಸ್ಥೆಗಳು, ಕಾಪೆರ್Çರೇಟ್ ಸಂಸ್ಥೆಗಳು ಕೈ ಜೋಡಿಸಿದ್ದು, ಆಯಾಯ ಪ್ರದೇಶಗಳ ಹವಾಮಾನಕ್ಕೆ ತಕ್ಕಂತೆ ಹೊಂದಿಕೊಳ್ಳುವ ಗಿಡಗಳನ್ನು ನೆಡಲಾಗುವುದು. ರಾಜಸ್ಥಾನದ ನಂತರ ಭಾರತದಲ್ಲಿ ಅತಿ ಹೆಚ್ಚು ಹಾಗೂ ಅತಿ ವೇಗವಾಗಿ ಒಣ ಮರುಭೂಮಿಯಾಗುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕವೂ ಸೇರಿದೆ ಎಂದು ಅಧ್ಯಯನ ವರದಿಯೊಂದು ನಿಜಕ್ಕೂ ಆತಂಕಕಾರಿ.

ಕಳೆದ ಮೂರ್ನಾಲ್ಕು ದಶಕಗಳಿಂದ ನಾನಾ ಕಾರಣಗಳಿಗಾಗಿ ನಮ್ಮ ರಾಜ್ಯದ ಹಸಿರಿನ ಹೊದಿಕೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ರಾಜ್ಯದ ಹಸಿರನ್ನು ಪುನರುಜ್ಜೀವಗೊಳಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಕಳೆದ 2017 ಜೂ.5ರಿಂದ ಆಗಸ್ಟ್ 15ರ ವರೆಗೂ ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಅದೇ ರೀತಿ ಈ ಬಾರಿಯೂ ಸಹ ಎಲ್ಲ ತಾಲೂಕು, ಹೋಬಳಿ ಮಟ್ಟದಲ್ಲಿ ಸರ್ಕಾರಿ ಅಥವಾ ಖಾಸಗಿ ಸ್ಥಳಗಳಲ್ಲಿ ಸಂಬಂಧಪಟ್ಟವರ ಅನುಮತಿ ಪಡೆದು ಸಸಿ ನೆಡಲಾಗುವುದು. ಬೀಜದ ಉಂಡೆ ಅಥವಾ ಸೀಡ್‍ಬಾಲ್ ತಯಾರಿ ಒಂದು ಉತ್ತಮ ವಿಧಾನ. ಇದರ ಮುಖಾಂತರವೂ ಸಹ ಸಸಿ ನೆಡುವುದಕ್ಕೆ ಪ್ರಯೋಜನವಾಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಭಾರದ್ವಾಜ್ ತಿಳಿಸಿದ್ದಾರೆ.
ಗಣಪತಿ ಹೆಗಡೆ, ರಾಧಾಕೃಷ್ಣ ಹೊಳ್ಳ, ಮಾಲಿನಿ ಭಾಸ್ಕರ್, ಅಪರ್ಣಾ ಪಟವರ್ಧನ್, ಚೈತನ್ಯ, ನಿತಿನ್ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ