ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವಿಧಾನಸೌಧಕ್ಕೆ ಮಾತ್ರ ಸೀಮಿತ – ಎಚ್.ಡಿ.ದೇವೇಗೌಡ

 

ಬೆಂಗಳೂರು, ಮೇ 26-ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವಿಧಾನಸೌಧಕ್ಕೆ ಮಾತ್ರ ಸೀಮಿತವಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಮಾತನಾಡಿದ ಗೌಡರು, ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಉಳಿಸುವುದು ನನ್ನ ಜವಾಬ್ದಾರಿ ಜೊತೆಗೆ ಬಿಬಿಎಂಪಿ ಸದಸ್ಯರು, ಕಾರ್ಯಕರ್ತರ ನಿರ್ಧಾರವೂ ಅದೇ ಆಗಿದೆ. ಹೀಗಾಗಿ ಯಾರ ದಾಕ್ಷಿಣ್ಯದಲ್ಲಿ ಜೆಡಿಎಸ್ ಪಕ್ಷ ಇಲ್ಲ. ಪಕ್ಷವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕಾರ್ಯಕರ್ತರಿಗಿದೆ ಎಂದರು.

ಈ ಹಿಂದೆಯೂ ಕಾಂಗ್ರೆಸ್‍ನೊಂದಿಗೆ ಮೈತ್ರಿ ಸರ್ಕಾರ ಮಾಡಲಾಗಿತ್ತು. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಹೊಂದಾಣಿಕೆ ಸಾಧ್ಯವಿಲ್ಲ ಎಂದರು.

ಮೈತ್ರಿ ಸರ್ಕಾರದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಸರ್ಕಾರಕ್ಕೆ ಅಡ್ಡಿ ತರಲು ಪ್ರಚಾರಕ್ಕಾಗಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ ಗೌಡರು, ಮೇ 12ರಂದು ಈ ಕ್ಷೇತ್ರದಲ್ಲಿ ಮತದಾನ ನಡೆಯಬೇಕಿತ್ತು. ಕಾಂಗ್ರೆಸ್ ಅಭ್ಯರ್ಥಿಯ ಗುಣಗಾನ ಮಾಡುವುದಿಲ್ಲ. ಆ ಅಭ್ಯರ್ಥಿ ಏನು ಮಾಡಿದ್ದಾರೆ ಎಂಬುದು ಚುನಾವಣಾ ಆಯೋಗದ ಮುಂದಿದೆ. ಈ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ಸದಸ್ಯರ ಮನವಿಯಂತೆ ರಾಮಚಂದ್ರ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ ಎಂದರು.

ಅಪ್ಪ-ಮಗನ ಬಗ್ಗೆಯೇ ಮಾತನಾಡುವವರ ಬಗ್ಗೆ ಉತ್ತರಿಸುವ ಕಾಲ ಹತ್ತಿರವಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಗೌಡರು ಹರಿಹಾಯ್ದರು.
ಯಾರ್ಯಾರು ಏನೇನು ಮಾಡಿದ್ದಾರೆ ಎಂಬುದು ನಮಗೆ ಗೊತ್ತಿದೆ. ನಮಗೆ ಅವರ ಸರ್ಟಿಫಿಕೇಟ್ ಬೇಕಾಗಿಲ್ಲ. ಅಲ್ಪಸಂಖ್ಯಾತರು ಜೆಡಿಎಸ್‍ಗೆ ಹೋಗಿ ಮತ ಚಲಾಯಿಸಿದರೆ ಬಿಜೆಪಿಗೆ ಹೋಗುತ್ತದೆ ಎಂದು ಹೇಳಿದ್ದರು. ಈಗಲಾದರೂ ಅವರು ಜೆಡಿಎಸ್‍ನ ಬದ್ಧತೆಯನ್ನು ಅರ್ಥ ಮಾಡಿಕೊಳ್ಳಬೇಕು. ಮುಸಲ್ಮಾನರಿಗೆ ಯಾರು ಮೀಸಲಾತಿ ಸೌಲಭ್ಯ ಕೊಟ್ಟರು ದೇಶದ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರೇ ಎಂದು ಪ್ರಶ್ನಿಸಿದರು.
ಬೆಂಗಳೂರು ಮೇಯರ್ ಸ್ಥಾನವನ್ನು ಮುಸ್ಲಿಮರಿಗೆ ಕೊಟ್ಟವರು ನಾವು. ನಾನು ಎಲ್ಲ ಕಡೆ ಭಾಷಣ ಮಾಡಬೇಕು. ಮಾತನಾಡುವುದಕ್ಕೆ ತುಂಬ ವಿಷಯವಿದೆ. ಎಲ್ಲ ಕಡೆಯೂ ಮಾತನಾಡುತ್ತೇನೆ ಎಂದರು.
ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರೊಂದಿಗೆ ಶಾಸಕ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಕೋನರೆಡ್ಡಿ , ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಮತ್ತಿತರರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ