ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಿದ ಅಧಿಕಾರಿ, ಸಿಬ್ಬಂದಿಗಳ ಸಂಭಾವನೆ- 30 ಕೋಟಿ ರೂ. ಬಿಡುಗಡೆ

ಬೆಂಗಳೂರು,ಮೇ 26-ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಿದ ಎಲ್ಲ ಅಧಿಕಾರಿ, ಸಿಬ್ಬಂದಿಗಳ ಗೌರವ ಸಂಭಾವನೆಯನ್ನು ಪರಿಷ್ಕರಿಸಿ ಸರ್ಕಾರ 30 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಕಳೆದ 2014 ಮಾರ್ಚ್ 17ರಂದು ಗೌರವ ಸಂಭಾವನೆಯನ್ನು ಪರಿಷ್ಕರಿಸಲಾಗಿತ್ತು. ಈಗಿನ ಬೆಲೆಸೂಚಿಗೆ ಅನುಗುಣವಾಗಿ ಸಂಭಾವನೆ ದರಗಳನ್ನು ಪರಿಷ್ಕರಿಸುವುದು ಅಗತ್ಯವೆಂದು ಪರಿಗಣಿಸಿ ಆರ್ಥಿಕ ಇಲಾಖೆಯು 30 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಿದೆ.
ಫ್ಲೈಯಿಂಗ್ ಸರ್ವೆಲೆನ್ಸ್ ತಂಡ, ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳಿಗೆ ಗೌರವ ಸಂಭಾವನೆಯನ್ನು 1200 ರೂ.ನಿಂದ 6000 ರೂ.ಗಳಿಗೆ ಹೆಚ್ಚಿಸಲಾಗಿದೆ.
ಮತಗಟ್ಟೆ ಅಧಿಕಾರಿ, ಮತ ಎಣಿಕೆ ಮೇಲ್ವಿಚಾರಕರ ಗೌರವ ಸಂಭಾವನೆಯನ್ನು 350ರಿಂದ 500 ರೂ.ಗಳಿಗೆ , ಮೈಕ್ರೊ ಅಬ್ಸರ್ವರ್‍ಗೆ 1000ರಿಂದ 1500 ರೂ.ಗೆ ಪರಿಷ್ಕರಿಸಲಾಗಿದೆ.

ಡಿ ಗ್ರೂಪ್‍ನವರಿಗೆ 150ರಿಂದ 200 ರೂ.ಗೆ ಹೆಚ್ಚಿಸಲಾಗಿದೆ. ಸಹಾಯಕ ವೆಚ್ಚ ವೀಕ್ಷಕರಿಗೆ 7500ರಿಂದ 10000 ರೂ.ಗೆ, ವಿಡಿಯೋ ಸರ್ವೆಲೆನ್ಸ್ ತಂಡ, ವಿಡಿಯೋ ವೀವಿಂಗ್, ಅಕೌಂಟಿಂಗ್ ಟೀಂ, ದೂರು ನಿರ್ವಹಣಾ ಘಟಕ, ವೆಚ್ಚ ನಿರ್ವಹಣಾ ತಂಡ ಹಾಗೂ ಎಂಸಿಎಂಸಿಗೆ ನೀಡುವ ಗೌರವ ಸಂಭಾವನೆಯನ್ನು 1200ರಿಂದ 6000 ರೂ.ಗೆ ಹೆಚ್ಚಿಸಲಾಗಿದೆ.
ಇದೇ ರೀತಿ ಚಾಲಕರಿಗೆ ನಿತ್ಯ 175ರಿಂದ 250 ರೂ.ಗೆ ಹೆಚ್ಚಿಸಲಾಗಿದೆ. ಹೀಗೆ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಪಾಲ್ಗೊಂಡ ಎಲ್ಲ ಅಧಿಕಾರಿ, ಸಿಬ್ಬಂದಿಗಳ ಗೌರವ ಧನವನ್ನು ಪರಿಷ್ಕರಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ