ಕಾಂಗ್ರೆಸ್ ಹಾಗೂ ಜೆಡಿಎಸ್ ಒಗ್ಗೂಡಿ ಸರ್ಕಾರ ರಚಿಸಲು ಮುಂದಾಗಿರುವುದಕ್ಕೆ ರಾಜ್ಯಪಾಲ್ಯರ ಅನುಮತಿ ನೀಡದಿರುವುದು ಸರಿಯಲ್ಲ: ಒಕ್ಕಲಿಗರ ಜಾಗೃತಿ ವೇದಿಕೆ

 

ಬೆಂಗಳೂರು, ಮೇ17- ಚುನಾವಣೆ ಫಲಿತಾಂಶ ಅತಂತ್ರವಾಗಿ ದೊರೆತ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಗ್ಗೂಡಿ ಸರ್ಕಾರ ರಚಿಸಲು ಮುಂದಾಗಿರುವುದಕ್ಕೆ ರಾಜ್ಯಪಾಲ್ಯರ ಅನುಮತಿ ನೀಡದಿರುವುದು ಸರಿಯಲ್ಲ ಎಂದು ಒಕ್ಕಲಿಗರ ಜಾಗೃತಿ ವೇದಿಕೆ ಹೇಳಿದೆ.

ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೆ.ಸಿ.ಗಂಗಾಧರ್ ಮಾತನಾಡಿ, ಚುನಾವಣೆಯಲ್ಲಿ ಯಾವುದೇ ಪಕ್ಷ ಸರ್ಕಾರ ರಚಿಸಲು ಅಗತ್ಯವಿರುವಷ್ಟು ಸ್ಥಾನ ಗಳಿಸದ ಹಿನ್ನೆಲೆಯಲ್ಲಿ 2ನೇ ಸ್ಥಾನ ಪಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಒಗ್ಗೂಡಿ ಅಧಿಕಾರ ನಡೆಸಲು ಮುಂದಾಗಿರುವುದಕ್ಕೆ ರಾಜ್ಯಪಾಲರು ಸಮ್ಮತಿ ಸೂಚಿಸಬೇಕಿದೆ. ಅದರ ಬದಲಿಗೆ ಬಿಜೆಪಿಯವರಿಗೆ ಅವಕಾಶ ನೀಡಿದರೆ ರಾಜಭವನಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದರೆ 117 ಸ್ಥಾನಗಳು ದೊರೆಯಲಿದೆ. ಆದರೆ ಬಿಜೆಪಿಯವರಿಗೆ ಕೇವಲ 104 ಶಾಸಕರಿರುವುದರಿಂದ ರಾಜ್ಯಪಾಲರು ಕಾಂಗ್ರೆಸ್-ಜೆಡಿಎಸ್‍ನ ನಿರ್ಧಾರಕ್ಕೆ ಸಹಮತ ನೀಡಬೇಕು. ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ