ಬೆಂಗಳೂರು:ಮೇ-16: ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆ ಗರಿಗೆದರಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಜೊತೆಯಾಗಿ ಮೈತ್ರಿ ಸರ್ಕಾರ ರಚಿಸಲು ನಿರ್ಧರಿಸಿವೆ.
ಈ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಸ್ಘಾಸಕಾಂಗ ಪಕ್ಷದ ನಾಯಕರ್ನ್ನಾಗಿ ಆಯ್ಕೆ ಮಾಡಲಾಗಿದೆ. ಈ ವೇಳೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಕೇಂದ್ರದ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ ಬಿಜೆಪಿಯವರು ಆಪರೇಷನ್ ಕಮಲಕ್ಕೆ ಕೈ ಹಾಕಿದರೆ ಎರಡು ಪಟ್ಟು ಬಿಜೆಪಿ ಶಾಸಕರಿಗೆ ಆಪರೇಶನ್ ಮಾಡಲಾಗುವುದು ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಜೊತೆ ಹೋಗಲು ಈಗಾಗಲೇ ನಿರ್ಧರಿಸಲಾಗಿದೆ. ಬೇರೆ ನಿರ್ಧಾರ ಕೈಗೊಳ್ಳುವ ಪ್ರಶ್ನೆಯೇ ಇಲ್ಲ ಎಂದರು. ಜೆಡಿಎಸ್ ಗೆ ಬೆಂಬಲ ನೀಡಿರುವ ಕಾಂಗ್ರೆಸ್ ಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಾವು ಅಧಿಕಾರದ ಆಸೆಯಿಂದ ಕಾಂಗ್ರೆಸ್ ನಿರ್ಧಾರವನ್ನು ಒಪ್ಪಿಕೊಂಡಿಲ್ಲ. ರಾಜ್ಯದ ಅಭಿವೃದ್ಧಿಗಾಗಿ ನಾನು ಸರ್ಕಾರ ರಚನೆಗೆ ಮುಂದಾಗಿದ್ದೇನೆ ಎಂದರು.
ಮೋದಿಯವರ ವರ್ಚಸ್ಸಿನ ಫಲವಾಗಿ ಬಿಜೆಪಿಗೆ 104 ಸೀಟು ಸಿಕ್ಕಿದ್ದಲ್ಲ. ಆ ರೀತಿಯ ವಿಶ್ಲೇಷಣೆ ಸರಿಯಲ್ಲ. ಬಿಜೆಪಿಯವರು ದೇಶದ ಹಲವು ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದಾರೆ. ಇಲ್ಲಿ ಯಾಕೆ ಬಿಜೆಪಿ ನಾಯಕರು ಬೇರೆ ರೀತಿಯ ನಿರ್ಧಾರ ತೆಗೆದುಕೊಳ್ತಿದ್ದಾರೆ ಎಂದು ಪ್ರಶ್ನಿಸಿದರು.ಕೆಲವರು ಜೆಡಿಎಸ್ ಅನ್ನು ಮುಗಿಸಲು ಹೋಗಿ ಬಿಜೆಪಿಗೆ ಮತ ಹಾಕಿದ್ದಾರೆ. ಇಲ್ಲವಾಗಿದ್ದರೆ ಬಿಜೆಪಿ 80 ಸ್ಥಾನವನ್ನು ಮೀರುತ್ತಿರಲ್ಲಿಲ್ಲ ಎಂದು ಹೇಳಿದ್ದಾರೆ.
ಮೋದಿ ದೇಶದಲ್ಲಿ ಭ್ರಷ್ಟಾಚಾರ ನಿಲ್ಲಿಸುವುದಾಗಿದ್ದರೆ, ನನ್ನ ಶಾಸಕರಿಗೆ ಇವತ್ತು 100 ಕೋಟಿಯ ಆಫರ್ ಮಾಡುತ್ತಿರಲಿಲ್ಲ. ಅವರು ಹಣದ ಜೊತೆ ಕ್ಯಾಬಿನೆಟ್ ಖಾತೆ ಕೊಡಿಸಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಇದನ್ನು ರಾಜ್ಯದ ಜನ ಗಮನಿಸಬೇಕು. ಬಿಜೆಪಿಯವರು ಕುದುರೆ ವ್ಯಾಪಾರಕ್ಕೆ ಇಳಿದಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
104 ಸ್ಥಾನ ಪಡೆದಿರುವ ಬಿಜೆಪಿಗೆ 9 ಸ್ಥಾನಗಳ ಕೊರತೆ ಇದೆ. ಹೀಗಿದ್ದರು ಬಿಜೆಪಿ ಹಕ್ಕು ಮಂಡನೆ ಮಾಡಿದೆ. ಕೊರತೆ ಇರುವ 9 ಶಾಸಕರನ್ನು ತಮ್ಮತ್ತ ಸೆಳೆಯಲು ಬಿಜೆಪಿ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ. ಇದಕ್ಕೆ ಹಣ ಎಲ್ಲಿಂದ ಬರುತ್ತದೆ. ನನ್ನ ಪಕ್ಷದ ಕೆಲ ಶಾಸಕರಿಗೆ 100 ಕೋಟಿ ರು. ಜತೆಗೆ ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನ ನೀಡುವ ಆಮಿಷ ಹೂಡಿದ್ದಾರೆ ಎಂದು ತಿಳಿಸಿದರು.
ನನಗೆ ಅಧಿಕಾರಕ್ಕಿಂತ ಹೆಚ್ಚಾಗಿ ದೇಶದಲ್ಲಿ ಇವತ್ತು ಉಂಟಾಗಿರುವ ರಾಜಕೀಯ ಬಿರುಕು ಸರಿಪಡಿಸೋದು ಮುಖ್ಯವಾಗಿದೆ. ನನಗೆ ಫಲಿತಾಂಶ ಖುಷಿ ತಂದಿಲ್ಲ. ಎರಡೂ ಪಕ್ಷಗಳಿಂದ ನನಗೆ ಸರಕಾರ ರಚಿಸಲು ಆಫರ್ ಇದೆ. ಆದರೆ ತಂದೆಯವರಿಗೆ ಮತ್ತೆ ಧಕ್ಕೆ ತರಲು ಹೋಗಲಾರೆ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ಜೊತೆ ಹೋಗಲಾರೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
Karnataka assembly election,JDS, H D Kumaraswamy,Pressmeet,