ಬೆಂಗಳೂರು:ಮೇ-16: ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಕ್ಷಣ ಕ್ಷಣಕ್ಕೂ ಕುತೂಹಲವನ್ನು ಇಮ್ಮಡಿಗೊಳಿಸುತ್ತಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಬಿ ಎಸ್ ಯಡಿಯೂರಪ್ಪ ಆಯ್ಕೆಯಾಗಿದ್ದಾರೆ.
ಇಂದು ಬೆಳಿಗ್ಗೆ ನಡೆದ ಬಿಜೆಪಿ ನೂತನ ಶಾಸಕರ ಜತೆಗಿನ ಸಭೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ, ಶಿಕಾರಿಪುರದ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಹತ್ತು ನಿಮಿಷ ಕಾಲ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆದಿದೆ.
ಶಾಸಕಾಂಗ ಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಯಡಿಯೂರಪ್ಪ ಅವರನ್ನು ಆಯ್ಕೆ ಮಾಡುವ ಬಗ್ಗೆ ಮುಧೋಳ ಶಾಸಕ ಗೋವಿಂದ ಕಾರಜೋಳ ಸೂಚಿಸಿದರು. ಕಾರಜೋಳ ಸೂಚನೆಯನ್ನು ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅನುಮೋದಿಸಿದರು.
ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ರಾಣೆಬೆನ್ನೂರು ಪಕ್ಷೇತರ ಶಾಸಕ ಆರ್. ಶಂಕರ್, ಈಶ್ವರಪ್ಪ, ಸದಾನಂದ ಗೌಡ, ಬಸವರಾಜ್ ಬೊಮ್ಮಯಿ, ಪಿ ಸಿ ಮೋಹನ್, ಸಿಎಂ ಉದಾಸಿ, ಶೋಭ ಕರಂದ್ಲಾಜೆ, ಆರ್ ಶಂಕರ್, ಅರವಿಂದ್ ಲಿಂಬಾವಳಿ, ಸುರೇಶ್ ಅಂಗಡಿ, ಪುಟ್ಟಸ್ವಾಮಿ ಈ ಸಂದರ್ಭದಲ್ಲಿದ್ದರು.
ಶಾಸಕಾಂಗ ಸಭೆ ಬಳಿಕ ರಾಜಭವನಕ್ಕೆ ತೆರಳಿದ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ರಾಜ್ಯಪಾಲ ವಜುಭಾಯ್ ವಾಲಾ ಅವರನ್ನು ಭೇಟಿ ಮಾಡಿದರು. ಈ ವೇಳೆ 104 ಶಾಸಕರ ಬೆಂಬಲವಿರುವ ಎರಡು ಪತ್ರಗಳನ್ನು ರಾಜ್ಯಪಾಲರಿಗೆ ಸಲ್ಲಿಸಿದ ಯಡಿಯೂರಪ್ಪ ಅವರು, ಸರ್ಕಾರ ರಚನೆ ಮಾಡಲು ಮೊದಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ಪಕ್ಷ ನನ್ನನ್ನು ಶಾಸಕಾಂಗ ಸಭೆ ನಾಯಕನಾಗಿ ಆಯ್ಕೆ ಮಾಡಿದೆ. ಸರ್ಕಾರ ರಚನೆ ಕುರಿತು ಬಹುಮತ ಸಾಬೀತಿಗೆ ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಈಗಾಗಲೇ ಪತ್ರವನ್ನು ನೀಡಲಾಗಿದೆ. ಶೀಘ್ರದಲ್ಲಿಯೇ ರಾಜ್ಯಪಾಲರು ನನ್ನನ್ನು ಕರೆಯಲಿದ್ದಾರೆ. ಈ ಬಗ್ಗೆ ನನಗೆ ವಿಶ್ವಾಸವಿದೆ. ಭೇಟಿ ಸಂದರ್ಭದಲ್ಲಿ ಸೂಕ್ತ ರೀತಿಯ ನಿರ್ಧಾರ ಕೈಗೊಳ್ಳುತ್ತೇನೆಂದು ವಜುಭಾಯ್ ವಾಲಾ ಅವರು ಭರವಸೆ ನೀಡಿದ್ದಾರೆ. ರಾಜ್ಯಪಾಲರಿಂದ ಮಾಹಿತಿ ಬಂದ ಕೂಡಲೇ ಈ ಬಗ್ಗೆ ಅಧಿಕೃತ ಮಾಹಿತಿ ನೀಡುತ್ತೇನೆಂದು ತಿಳಿಸಿದ್ದಾರೆ.
Karnataka assembly election, BJP, Yeddyurappa, BJP Legislative Party Leader