ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ: ಕೈಗೆ ಸಿಗದ ಕೆಲ ಶಾಸಕರು!

ಬೆಂಗಳೂರು,ಮೇ 16

ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದ್ದು, ಕಾಂಗ್ರೆಸ್‌ನ ಪ್ರಮುಖ ನಾಯಕರ ಮುಖದಲ್ಲಿ ಆತಂಕ ಮನೆ ಮಾಡಿದೆ. ಸಭೆಗೆ ಈಗಾಗಲೇ ಸಂಸದ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದಾರೆ. ಜೊತೆಗೆ ಬೀದರ್ ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಆಗಮಿಸಿದ್ದಾರೆ. ಬೆಳಗಾವಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಹೆಚ್‌ಎಎಲ್ ಏರ್‌ಪೋರ್ಟ್‌ಗೆ ಆಗಮಿಸಿದ ಈಶ್ವರ್‌ ಖಂಡ್ರೆ ಹಾಗೂ ಕಾಂಗ್ರೆಸ್‌ನ ಇತರ ಶಾಸಕರು ಬಳಿಕ ಕ್ವೀನ್ಸ್ ರಸ್ತೆಯ‌ ಕೆಪಿಸಿಸಿ ಕಚೇರಿಗೆ ತೆರಳಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್‌ ಶಾಸಕರಾದ ಶಾಸಕ ಅಮರೇಗೌಡ ನಾಯಕ ಹಾಗೂ ಭೀಮನಾಯ್ಕ್ ಸಂಪರ್ಕಕ್ಕೆ ಎಷ್ಟೇ ಪ್ರಯತ್ನಿಸಿದ್ರು, ಕೈ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಿಳಿದು ಬಂದಿದೆ. ಹಾಗೆಯೇ ಕಾಂಗ್ರೆಸ್‌ನಿಂದ ಗೆದ್ದಿರುವ ಶಾಸಕ ನಾಗೇಂದ್ರ ಹಾಗೂ ಆನಂದ್ ಸಿಂಗ್ ಕೂಡ ಕೈ ಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆನಂದ್ ಸಿಂಗ್‌ಗೆ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ನಿನ್ನೆ ಕರೆ ಮಾಡಿದಾಗ ಸಿಎಲ್‌ಪಿಗೆ ಬರುವೆ ಎಂದು ಆನಂದ್ ಸಿಂಗ್ ಭರವಸೆ ನೀಡಿದ್ದಾರೆ. ಆದ್ರೆ ಇಂದು ಕರೆ ಮಾಡಿದ್ರೆ ಪೋನ್ ರಿಸೀವ್ ಮಾಡದ ಆನಂದ್ ಸಿಂಗ್, 11.30ರೊಳಗಡೆ ಬಾರದೇ ಇದ್ರೆ ಬಹುತೇಕ ಇವರು ಕಾಂಗ್ರೆಸ್‌ಗೆ ಕೈ ಕೊಟ್ಟ ಹಾಗೆ ಎನ್ನಲಾಗುತ್ತಿದೆ. ಇದರಿಂದ ಕೆಪಿಸಿಸಿ ಅಧ್ಯಕ್ಷರು ಚಿಂತೆಗೀಡಾಗಿದ್ದಾರೆ ಎನ್ನಲಾಗುತ್ತಿದೆ.
ಎಲ್ಲರಿಗೂ ಕರೆ ಮಾಡ್ತಾ ಇದ್ದೇವೆ. ಶಾಸಕಾಂಗ ಸಭೆಗೆ ಎಲ್ಲರೂ ಆಗಮಿಸಲಿದ್ದಾರೆ. ಗೆದ್ದ ಶಾಸಕರನ್ನು ಹಳ್ಳಿ ಜನ ಬಿಡುತ್ತಿಲ್ಲ. ಹೀಗಾಗಿ ಬರಲು ತಡವಾಗುತ್ತಿದೆ ಬಿಜೆಪಿಯವರು ಆಪರೇಷನ್ ಕಮಲ ಮಾಡಿದರೆ, ಅದು ತಿರುಗು ಬಾಣವಾಗಲಿದೆ. ಒಂದು ವೇಳೆ ರಾಜ್ಯಪಾಲರು ಅವಕಾಶ ನೀಡದಿದ್ದರೆ, ನಾವು ರಾಜಕಾರಣಿಗಳು, ನಾವು ರಾಜಕೀಯವಾಗಿ ಎಲ್ಲ ಕ್ರಮ ಕೈಗೊಳ್ಳುತ್ತೇವೆ ಎಂದು ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ತಿಳಿಸಿದರು.
ಕಾಂಗ್ರೆಸ್ ಜೆಡಿಎಸ್ ಒಂದಾಗಿ ಸಮ್ಮಿಶ್ರ ಸರಕಾರ ರಚನೆ ಮಾಡುತ್ತೇವೆ. ಈಗಾಗಲೇ ರಾಜ್ಯಪಾಲರಲ್ಲಿ ಸರ್ಕಾರ ರಚನೆಗೆ ಅನುಮತಿ ಕೋರಿದ್ದೇವೆ. ಆದರೆ ಮೋದಿ ನಿನ್ನೆ ಭಾಷಣದಲ್ಲಿ ನಾವು ಕಾಂಗ್ರೆಸ್ ಹಾಗೂ ಜೆಡಿಎಸ್ ಜೊತೆ ಮೈತ್ರಿ  ಮಾಡಿಕೊಳ್ಳಲ್ಲ ಎಂಬ ಮಾತನ್ನು ಹೇಳಿದ್ದಾರೆ. ಹೀಗಾಗಿ, ಅವರ ಎಲ್ಲ ಷಡ್ಯಂತ್ರಕ್ಕೆ ರೆಡಿಯಾಗಿದ್ದಾರೆ. ಅವರು ಆಪರೇಷನ್ ಕಮಲಕ್ಕೆ ಸಿದ್ಧವಾಗುತ್ತಿದ್ದಾರೆ ಎಂದು ಸೂಚ್ಯವಾಗಿ ಹೇಳಿದ್ದಾರೆ. ಬಿಜೆಪಿಯವರು ಈ ಮುಂಚೆ ಆ ರೀತಿ ಮಾಡಿದ್ದಾರೆ.  ಬಿಜೆಪಿ ವಾಮಮಾರ್ಗ ಹಿಡಿಯಲಿದೆ. ನಾನೇ ಅವರಲ್ಲಿ ಮನವಿ ಮಾಡುತ್ತೇನೆ ಅಂಥ ಕೆಟ್ಟ ಪದ್ಧತಿ, ಹೇಸಿಗೆ ಕೆಲಸಕ್ಕೆ ಕೈ ಹಾಕಬೇಡಿ. ಬಿಜೆಪಿಯವರು ಅನೈತಿಕ, ಕೆಟ್ಟ ರಾಜಕಾರಣ ಮಾಡಲು ನಿಸ್ಸೀಮರು. ಅವರು ಕುದುರೆ ವ್ಯಾಪಾರಕ್ಕೆ ನಿಸ್ಸೀಮರು. ಒಂದು ವೇಳೆ ಹಾಗೆ ಮಾಡಿದರೆ ಜನ ಛೀಮಾರಿ ಹಾಕುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನ ಶಾಸಕ ಆರ್‌.ವಿ ದೇಶಪಾಂಡೆ ಮಾತನಾಡಿ, ನಮ್ಮ ನಾಯಕರು ಇಷ್ಟು ಬೇಗ ಶಾಸಕಾಂಗ ಪಕ್ಷದ ಸಭೆ ಇಟ್ಟುಕ್ಕೊಳಬಾರದಿತ್ತು. ದೂರದ ಜಿಲ್ಲೆಗಳಿಂದ ಶಾಸಕರು ಬರಬೇಕಿದೆ. 11 ಗಂಟೆ ನಂತರ ಸಭೆ ಇಟ್ಕೋಬೇಕಿತ್ತು ಎಂದರು. ಇನ್ನು ಬಿಜೆಪಿಯವರು ನಮ್ಮ ಶಾಸಕರಿಗೆ ಕರೆ ಮಾಡಿದ್ರೂ ಯಾರೂ ಹೋಗಲ್ಲ. ರಾಜ್ಯಪಾಲರು ಕಾಂಗ್ರೆಸ್ ಜೆಡಿಎಸ್‌ಗೆ ಆಹ್ವಾನ ಕೊಡುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ