ಚುನಾವಣಾ ಫಲಿತಾಂಶದಲ್ಲಿ ಅತಂತ್ರ ಪರಿಸ್ಥಿತಿ ಹೊರಬಿದ್ದರೆ ಯಾವರೀತಿ ಸರ್ಕಾರ ರಚಿಸಬೇಕು: ಶುರುವಾಗಿದೆ ರಾಜಕೀಯ ಲೆಕ್ಕಾಚಾರಗಳು

ಬೆಂಗಳೂರು, ಮೇ 13- ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಮೇ 15ರಂದು ಪ್ರಕಟವಾಗಲಿದ್ದು, ಅತಂತ್ರ ಪರಿಸ್ಥಿತಿ ಹೊರಬಿದ್ದರೆ ಯಾವ ರೀತಿ ಸರ್ಕಾರ ರಚಿಸಬೇಕು ಎಂಬ ರಾಜಕೀಯ ಲೆಕ್ಕಾಚಾರಗಳು ಈಗಾಗಲೇ ಶುರುವಾಗಿವೆ.

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷಗಳವರು ನಾವೇ ಸರ್ಕಾರ ರಚಿಸುತ್ತೇವೆ ಎಂದು ಮೇಲ್ನೋಟಕ್ಕೆ ಹೇಳುತ್ತಿದ್ದರೂ ಮತಗಟ್ಟೆ ಸಮೀಕ್ಷೆಗಳನ್ನು ಗಮನಿಸಿದರೆ ಯಾವ ಪಕ್ಷಕ್ಕೂ ಬಹುಮತ ಸಿಗುವ ಸಾಧ್ಯತೆ ಕಡಿಮೆ ಇದೆ.
ಕೆಲವು ಮತಗಟ್ಟೆ ಸಮೀಕ್ಷೆಗಳು ನಿಜವಾದರೆ ಕಾಂಗ್ರೆಸ್ ಅಥವಾ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಆದರೆ, ಅತಂತ್ರ ಪರಿಸ್ಥಿತಿಯಾದರೆ ಏನು ಮಾಡಬೇಕು. ಬಿಜೆಪಿ-ಜೆಡಿಎಸ್ ಅಥವಾ ಕಾಂಗ್ರೆಸ್-ಜೆಡಿಎಸ್ ಎಂಬ ಲೆಕ್ಕಾಚಾರದಲ್ಲಿ ರಾಜಕೀಯ ನಾಯಕರು ತೊಡಗಿದ್ದಾರೆ.

ಜೆಡಿಎಸ್ ಕಿಂಗ್‍ಮೇಕರ್ ಪಾತ್ರ ವಹಿಸಿದರೆ, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಆ ಪಕ್ಷದೊಂದಿಗೆ ಸರ್ಕಾರ ರಚಿಸಲು ಯಾವ ರೀತಿ ವ್ಯವಹರಿಸುತ್ತದೆ. ಎರಡೂ ಪಕ್ಷಗಳು ಈಗಾಗಲೇ ಆ ಪಕ್ಷದೊಡಗೂಡಿ ಒಮ್ಮೆ ಮೈತ್ರಿ ಸರ್ಕಾರ ರಚನೆ ಮಾಡಿಕೊಂಡಿತ್ತು. ಈಗ ಮತ್ತೆ ಅಂತಹ ಪರಿಸ್ಥಿತಿ ಬಂದೊದಗಿದರೆ ಏನು ಮಾಡುತ್ತಾರೆ. ಕಿಂಗ್ ಮೇಕರ್ ಆಗುವ ಜೆಡಿಎಸ್‍ನ ಪಾತ್ರವೇನು ಎಂಬಿತ್ಯಾದಿ ಬಗ್ಗೆ ರಾಜಕೀಯ ಲೆಕ್ಕಾಚಾರ ನಡೆದಿದೆ.
ಚುನಾವಣೆ ಮುಗಿದಿದೆ, ನಾವೆಲ್ಲ ರಿಲ್ಯಾಕ್ಸ್ ಮೂಡ್‍ನಲ್ಲಿದ್ದೇವೆ. ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಆತ್ಮ ವಿಶ್ವಾಸದಿಂದ ಹೇಳುತ್ತಿದ್ದರೂ ಒಳಗೊಳಗೇ ಆತಂಕ ಮನೆ ಮಾಡಿದಂತಿದೆ.

ಅತಂತ್ರ ಪರಿಸ್ಥಿತಿ ಉಂಟಾದರೆ ಏನು ಮಾಡಬೇಕು ಎಂಬ ಪ್ರಶ್ನೆ ಎದುರಾಗಿದೆ. ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಲಿತ ಮಾಡಲು ನಮ್ಮದೇನೂ ತಕರಾರಿಲ್ಲ. ದಲಿತ ಸಿಎಂ ಮಾಡುವುದಾದರೆ ಸಿಎಂ ಪಟ್ಟ ತ್ಯಾಗ ಮಾಡಲು ನಾನು ಸಿದ್ಧನಿದ್ದೇನೆ. ದಲಿತ ಸಿಎಂ ಮಾಡಿದರೆ ದೇಶಕ್ಕೆ ಒಂದು ಸಂದೇಶ ರವಾನಿಸಿದಂತಾಗುತ್ತದೆ ಎಂಬ ದಾಳ ಉರುಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ದಲಿತ ಸಿಎಂ ಮಾಡುವ ಸಿಎಂ ಹೇಳಿಕೆಯನ್ನು ಸ್ವಾಗತಿಸಿದ್ದು, ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವ ತೀರ್ಮಾನವನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ನಡುವೆ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಈ ಸಂದರ್ಭದಲ್ಲಿ ದಲಿತ ಸಿಎಂ ವಿಷಯ ಪ್ರಸ್ತಾಪ ಮಾಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ. ಸಚಿವ ಎಂ.ಬಿ.ಪಾಟೀಲ್ ಕೂಡ ಇದಕ್ಕೆ ದನಿಗೂಡಿಸಿದ್ದಾರೆ.
ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುವುದಾಗಿ ಹೇಳಿದ್ದಾರೆ. ಇದೇ 17ರಂದು ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ.

ಜೆಡಿಎಸ್ ಪಕ್ಷದವರು ಎಲ್ಲ ಮತಗಟ್ಟೆ ಸಮೀಕ್ಷೆಗಳು ತಲೆಕೆಳಗಾಗಲಿವೆ. ನಾವೇ ಅಧಿಕಾರಕ್ಕೆ ಬರುವುದು ಎಂದು ಹೇಳುತ್ತಿದ್ದಾರೆ. ಆದರೆ, ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಏನು ಮಾಡಬೇಕೆಂಬುದರ ಬಗ್ಗೆ ಮೂರೂ ಪಕ್ಷಗಳ ಮುಖಂಡರು ಚರ್ಚೆ ಶುರುವಿಟ್ಟುಕೊಂಡಿದ್ದಾರೆ.
ರಾಜಕೀಯ ವಲಯದಲ್ಲಿ ಯಾರು, ಯಾರಿಗೆ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ. ಚುನಾವಣೆ ಸಂದರ್ಭದಲ್ಲಿ ಪರಸ್ಪರ ಆರೋಪ, ಟೀಕೆ, ವೈಯಕ್ತಿಕ ನಿಂದನೆಗಳನ್ನು ಮಾಡುತ್ತಿದ್ದ ರಾಜಕಾರಣಿಗಳು ಇಂದು ಅದಾವುದನ್ನೂ ಮಾಡಲಿಲ್ಲ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಚ್‍ಡಿಕೆ, ಬಿಎಸ್‍ವೈ ವಿರುದ್ಧ ನಾನು ಯಾವುದೇ ವೈಯಕ್ತಿಕ ಟೀಕೆ ಮಾಡುವುದಿಲ್ಲ ಎಂದು ಹೇಳಿದರು. ಅದೇ ರೀತಿ ಯಡಿಯೂರಪ್ಪನವರು ಕೂಡ ಹೇಳಿದರು.
ಈ ಎಲ್ಲ ಅಂಶಗಳನ್ನು ಗಮನಿಸಿದರೆ ಚುನಾವಣೆಗೋಸ್ಕರ ಹೋರಾಟ, ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆಯುತ್ತವೆ ಅಷ್ಟೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ