ಬೆಂಗಳೂರು:ಮೇ-12: ದೇಶದ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, 224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ.
ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿರುವ ಮತದಾನ ಸಂಜೆ 6 ಗಂಟೆಯವರೆಗೆ ನಡೆಯಲಿದೆ. 5.02 ಕೋಟಿ ಮತದಾರರು 222 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯವನ್ನು ಬರೆಯಲಿದ್ದಾರೆ.
ಬೆಂಗಳೂರಿನ ಜಯನಗರದ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಅವರ ನಿಧನದಿಂದಾಗಿ ತೆರವಾಗಿರುವ ಕ್ಷೇತ್ರ ಮತ್ತು ನಕಲಿ ಗುರುತಿನ ಚೀಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣೆ ಮುಂದೂಡಲ್ಪಟ್ಟಿರುವುದರಿಂದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಮೇ 28ಕ್ಕೆ ಮುಂದೂಡಲಾಗಿದ್ದು, 31ಕ್ಕೆ ಮತ ಎಣಿಕೆ ನಡೆಯಲಿದೆ.
ಈಗಾಗಲೇ ಜನರು ಮತಗಟ್ಟೆಯತ್ತ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಮೈಸೂರಿನ ಗುಂಗ್ರಾಲ್ ಛತ್ರ ಮತಗಟ್ಟೆಯಲ್ಲಿ ಜಿ.ಟಿ.ದೇವೇಗೌಡ ಅವರು ಪತ್ನಿ ಜತೆ ಬಂದು ಮತ ಚಲಾಯಿಸಿದ್ದಾರೆ. ಬೆಂಗಳೂರಿನ ರಾಜಾಜಿ ನಗರದಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್ ಮತ ಚಲಾಯಿಸಿದರು.
ಇನ್ನು ಶಿವಮೊಗ್ಗದ ಶಿಕಾರಿಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹುಚ್ಚುರಾಯಸ್ವಾಮಿ ದೇವಾಲಯಕ್ಕೆ ಪೂಜೆ ಸಲ್ಲಿಸಿ, ಬಳಿಕ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.
ಮಾಜಿ ಸಚಿವ ಬಿಜೆಪಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಸ್.ಎ.ರವೀಂದ್ರನಾಥ್ ಶಿರಮಗೊಂಡನಹಳ್ಳಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಪತ್ನಿ ರತ್ನಮ್ಮ ಅವರೂ ಮತ ಹಾಕಿದರು.
ಈ ನಡುವೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯ ಮತಗಟ್ಟೆ ಸಂಖ್ಯೆ 185 ರಲ್ಲಿ ಮತತ್ಯಂತ್ರ ಕೈಕೊಟ್ಟ ಪರಿಣಾಮ ಮತದಾನ ಪ್ರಕ್ರಿಯೆಗೆ ವಿಳಂಬವಾಗಿದೆ.
ಇನ್ನು ಮಂಡ್ಯ ತಾಲೂಕಿನ ಚಿಕ್ಕ ಮಂಡ್ಯ ಗ್ರಾಮದ ಮತ ಕೇಂದ್ರ 188 ರಲ್ಲಿ ವಿದ್ಯುತ್ ಇಲ್ಲದೆ ಮೇಣದ ಬತ್ತಿ ಹಚ್ಚಿಕೊಂಡು ಕುಳಿತು ಚುನಾವಣಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
Karnataka assembly election,Start