ಇನ್ನೂ ಒಂದು ವಾರಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ

 

ಬೆಂಗಳೂರು, ಮೇ 11- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆಯಾಗಿದ್ದು, ಇನ್ನೂ ಒಂದು ವಾರಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಜೆ ವೇಳೆ ಮಳೆ, ಗಾಳಿ, ಮಿಂಚು, ಗುಡುಗಿನ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಮತದಾರರು ಸಾಧ್ಯವಾದಷ್ಟು ನಾಳೆ ಸಂಜೆಗೂ ಮುನ್ನವೇ ಮತ ಚಲಾಯಿಸುವುದು ಸೂಕ್ತ ಎಂದು ಹೇಳಿದರು.

ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ಮೇಲ್ಮೈ ಸುಳಿಗಾಳಿ ಉಂಟಾಗಿದೆ. ಗಾಳಿಯ ಒತ್ತಡ ಕಡಿಮೆಯಾದಂತೆ ಮೋಡಗಳ ಚಲನೆಯೂ ಉಂಟಾಗಿ ದಟ್ಟವಾದ ಮೋಡಗಳು ಆಕಾಶವನ್ನು ಆವರಿಸುತ್ತವೆ. ಆಗ ಗುಡುಗು, ಮಿಂಚು ಹಾಗೂ ಗಾಳಿ ಸಹಿತ ಮಳೆಯಾಗುವ ಸಂಭವವಿದೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ಇನ್ನೂ ಒಂದು ವಾರ ಕಾಲ ಮಳೆ ಮುಂದುವರೆಯಲಿದ್ದು, ಒಂದಲ್ಲ ಒಂದು ಭಾಗದಲ್ಲಿ ಮಳೆಯಾಗಲಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಗಳಿವೆ.

ನಿನ್ನೆ ಸಂಜೆ ಹಾಗೂ ರಾತ್ರಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಹಾಸನ, ತುಮಕೂರು, ಧಾರವಾಡ, ಚಿತ್ರದುರ್ಗ ಸೇರಿದಂತೆ ಹಲವು ಕಡೆ ಮಳೆ ಬಿದ್ದ ವರದಿಯಾಗಿದೆ ಎಂದರು.
ನಿನ್ನೆ ಸಂಜೆ ಬೆಂಗಳೂರಿನಲ್ಲಿ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಭಾರೀ ಮಳೆಯಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿದ್ದಲ್ಲದೆ, ಕೆಲವೆಡೆ ಮರಗಳು, ವಿದ್ಯುತ್‍ಕಂಬಗಳು ಮುರಿದು ಬಿದ್ದಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಸಂಕಷ್ಟ ಎದುರಿಸುವಂತಾಯಿತು.

ಮಳೆ ವಿವರ(ಮಿಲಿಮೀಟರ್):
ಮಹದೇವಪುರ-20, ಹೊರಮಾವು-50, ಎಚ್‍ಎಎಲ್ ವಿಮಾನ ನಿಲ್ದಾಣ-22, ಗರುಡಾಚಾರ್‍ಪಾಳ್ಯ, ಬಸವನಪುರ-56, ಕೆ.ಆರ್.ಪುರ-68.5, ಹೂಡಿ-48.5, ಶಾಂತಿನಗರ-41, ಹೊರಮಾವು-46, ಹೊಯ್ಸಳನಗರ-30, ಪುಲಕೇಶಿನಗರ-25, ಮನೋರಾಯನಪಾಳ್ಯ-35.5, ಎಚ್‍ಬಿಆರ್‍ಲೇಔಟ್-32, ನಾಗೇನಹಳ್ಳಿ-30, ಹೇರೋಹಳ್ಳಿ-26, ಕೊಟ್ಟಿಗೆಪಾಳ್ಯ-34.5, ಜೆಪಿಪಾರ್ಕ್-20, ಸಂಪಂಗಿರಾಮನಗರ-59.5, ರಾಧಾಕೃಷ್ಣ ದೇವಾಲಯ ವಾರ್ಡ್-34, ಹೆಮ್ಮಿಗೆಪುರ-40, ಜ್ಞಾನಭಾರತಿ-26, ಎಚ್‍ಎಂಟಿವಾರ್ಡ್-21.5, ರಾಜರಾಜೇಶ್ವರಿನಗರ-34.5, ಮಾರತ್‍ಹಳ್ಳಿ-25.5, ಕಮ್ಮನಹಳ್ಳಿ-21.5, ಬೆನ್ನಿಗಾನಹಳ್ಳಿ-12.5 ಮಿಲಿಮೀಟರ್‍ನಷ್ಟು ಮಳೆಯಾದ ವರದಿಯಾಗಿದೆ ಶ್ರೀನಿವಾಸ್‍ರೆಡ್ಡಿ ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ