ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣ: ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ವಿರುದ್ಧದ ಆರೋಪ ದೃಢಪಡಿಸಿದ ಸಿಬಿಐ

ನವದೆಹಲಿ:ಮೇ-11: ಉತ್ತರ ಪ್ರದೇಶದ ಉನ್ನಾವೋ ರೇಪ್‌ ಕೇಸ್‌ ಆರೋಪಿಯಾಗಿರುವ ಬಂಗರಮಾವು ಕ್ಷೇತ್ರದ ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಸೆಂಗರ್‌ ವಿರುದ್ಧದ ಆರೋಪಗಳನ್ನು ಸಿಬಿಐ ದೃಢಪಡಿಸಿದೆ.

ಆರೋಪಿ ಶಾಸಕ ಸೆಂಗರ್‌ನ ಸಹವರ್ತಿ ಶಶಿ ಸಿಂಗ್‌ ಎಂಬಾತನು ಕಳೆದ ವರ್ಷ ಅಪ್ರಾಪ್ತ ವಯಸ್ಸಿನ ಸಂತ್ರಸ್ತೆಯನ್ನು ಉದ್ಯೋಗ ಕೊಡಿಸುವ ಆಮಿಷ ಒಡ್ಡಿ ಸೆಂಗರ್‌ ಮನೆಗೆ ಕರೆತಂದಿದ್ದ ಎಂದು ತಿಳಿಸಿರುವ ಸಿಬಿಐ, ಬಾಲಕಿ ಮೇಲೆ ಶಾಸಕ ಅತ್ಯಾಚಾರ ನಡೆಸಿರುವುದು ದೃಢವಾಗಿದೆ ಎಂದು ತಿಳಿಸಿದೆ.

ರೇಪ್‌ ಕೃತ್ಯ ನಡೆದಿದ್ದ ಉತ್ತರ ಪ್ರದೇಶದ ಮಾಖೀ ಗ್ರಾಮದಲ್ಲಿನ ಸೆಂಗರ್‌ ಮನೆಗೆ ಆತನ ಸಹವರ್ತಿ ಶಶಿ ಸಿಂಗ್‌ 2017ರ ಜೂನ್‌ 4ರಂದು ಸಂತ್ರಸ್ತೆಯನ್ನು ಕರೆತಂದಿದ್ದ. ಅಂದೇ ಆಕೆಯ ಮೇಲೆ ಶಾಸಕ ಮತ್ತು ಆತನ ಸಹವರ್ತಿಗಳು ಅತ್ಯಾಚಾರ ಎಸಗಿದ್ದರು. ಸೆಂಗರ್‌ ಮತ್ತು ಆತನ ಸಹವರ್ತಿಗಳು ಬಾಲಕಿಯ ಮೇಲೆ ಸರದಿ ಪ್ರಕಾರ ಅತ್ಯಾಚಾರ ನಡೆಸುವಾಗ ಪೊಲೀಸರು ಸೆಂಗರ್‌ ಮನೆಯ ಹೊರಗೆ ಕಾವಲು ಕರ್ತವ್ಯ ನಿರತರಾಗಿದ್ದರು ಎಂದು ಸಿಬಿಐ ಹೇಳಿದೆ.

ಅತ್ಯಾಚಾರ ಪ್ರಕರಣದ ಬಗ್ಗೆ ದೂರು ದಾಖಲಾದಾಗ ಪೊಲೀಸರು ಶಾಸಕ ಸೆಂಗರ್‌ನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

ಜೂನ್‌ 11ರಂದು ರೇಪ್‌ ಸಂತ್ರಸ್ತೆಯನ್ನು ಮೂವರು ಯುವಕರು ಪುನಃ ಅಪಹರಿಸಿದ್ದರು. ಈ ಯುವಕರು ರೇಪ್‌ ಸಂತ್ರಸ್ತೆಯ ಮೇಲೆ ನಿರಂತರ ಅತ್ಯಾಚಾರ ನಡೆಸಿ ಸುಮಾರು 8ರಿಂದ 9 ದಿನಗಳ ಕಾಲ ಆಕೆಯನ್ನು ಎಸ್‌ಯುವಿ ವಾಹನದಲ್ಲಿ ಕೂಡಿ ಹಾಕಿದ್ದರು.

ರೇಪ್‌ ಸಂತ್ರಸ್ತೆ ದೂರು ನೀಡಿದ ಹೊರತಾಗಿಯೂ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಲ್ಲಿ ವಿಳಂಬಿಸಿರುವುದು ಮತ್ತು ಅವರು ಆರೋಪಿ ಬಿಜೆಪಿ ಶಾಸಕನ ಒತ್ತಡಕ್ಕೆ ಮಣಿದಿರುವುದನ್ನು ಕೋರ್ಟ್‌ ಗಂಭೀರವಾಗಿ ಪರಿಗಣಿಸಿರುವ ಕಾರಣ ಸಿಬಿಐ ಈ ಪ್ರಕರಣದಲ್ಲಿ ಸ್ಥಳೀಯ ಪೊಲೀಸರ ಪಾತ್ರದ ಬಗ್ಗೆಯ ತನಿಖೆ ನಡೆಸುತ್ತಿದೆ.

Unnao gang rape case,CBI confirms rape, allegations against BJP MLA sengar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ