ಬೆಂಗಳೂರು:ಮೇ-10:ನನ್ನ ತಾಯಿ ಇಟಾಲಿಯನ್ ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಅಲ್ಲಿ ಹುಟ್ಟಿ ಬೆಳೆದಿದ್ದಕ್ಕಿಂತ ಹೆಚ್ಚಿನ ಅವಧಿ ಭಾರತದಲ್ಲೇ ಕಳೆದಿದ್ದಾರೆ. ಈ ದೇಶಕ್ಕಾಗಿ ಹೆಚ್ಚಿನ ತ್ಯಾಗ ಮಾಡಿದ್ದಾರೆ. ನೋವುಂಡಿದ್ದಾರೆ. ಸೋನಿಯಾ ಮತ್ತು ರಾಹುಲ್ ಬಗ್ಗೆ ಮಾತನಾಡುವುದರಿಂದ ಮೋದಿಯವರಿಗೆ ಖುಷಿ ಆಗುತ್ತೆ ಎಂಬುದಾದರೆ ಮಾತನಾಡಲಿ. ಅದು ಪ್ರಧಾನಿ ಗುಣಮಟ್ಟತೆಯನ್ನು ತೋರಿಸುತ್ತದೆ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದೆ ನಮಗೂ ಸಮಯ ಬರುತ್ತದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೀಷ್ಠಿಯಲ್ಲಿ ಮಾತನಾಡಿದ ಅವರು, ಇಟಲಿ ಮೂಲದವರಾದ ನನ್ನ ತಾಯಿ ನಾನು ಕಂಡಿರುವ ಎಷ್ಟೋ ಭಾರತೀಯರಿಗಿಂತಲೂ ದೇಶದ ಉತ್ತಮ ಪ್ರಜೆ ಎಂದು ಹೇಳಿದರು.
ದೇವಸ್ಥಾನ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ಕೊಟ್ಟಿದ್ದೇನೆ. ಜಾತಿಗಳನ್ನು ಒಡೆಯುವ ಯಾವುದೇ ಸಂಸ್ಥೆಗಳಿಗೆ ನಾನು ಹೋಗಿಲ್ಲ. ನಾವು ಅನುಸರಿಸುವ ಪದ್ಧತಿ ನಂಬಿಕೆಯೇ ಧರ್ಮ. ಹಿಂದು ಅನ್ನುವ ಬಿಜೆಪಿ ನಾಯಕರಿಗೆ ಹಿಂದು ಪದದ ಅರ್ಥ ಗೊತ್ತಿಲ್ಲ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ಗೆ ಬಹುಮತ ಬರುತ್ತದೆ. ಅತಂತ್ರ ವಿಧಾನಸಭೆ ಇರುವುದಿಲ್ಲ. ಈ ಚುನಾವಣೆ ಕನ್ನಡದ ಅಸ್ಮಿತೆ ಮೇಲೆ ನಡೆಯುತ್ತಿದೆ. ಕರ್ನಾಟಕ ಜನ ಕಾಂಗ್ರೆಸ್ಸನ್ನು ಆರಿಸುತ್ತಾರೆ.ಬಸವ ತತ್ವವೇ ನಮ್ಮ ತತ್ವ. ಅದೇ ನಮಗೆ ಸ್ಪಿರಿಟ್. ಆರ್ಎಸ್ಎಸ್ ಕರ್ನಾಟಕವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ನಾವು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದರು. ಭಾಷೆ, ಸಂಸ್ಕೃತಿ ಮತ್ತು ಬಸವ ತತ್ವದ ಮೇಲೆ ಸವಾರಿ ಮಾಡಲು ಆರ್ಎಸ್ಎಸ್ ಹೊರಟಿದೆ. ಆರ್ಎಸ್ಎಸ್ ಐಡಿಯಾಲಜಿ ಮತ್ತು ಕರ್ನಾಟಕದ ಅಸ್ಮಿತೆಯ ಮಧ್ಯೆ ನಡೆಯುವ ಹೋರಾಟ ಈ ಚುನಾವಣೆ ಎಂದು ಹೇಳಿದರು.
ದೇಶಕ್ಕೆ ಕರ್ನಾಟಕದ ಕೊಡುಗೆ ಅಪಾರ. ಬೆಂಗಳೂರು ರಾಷ್ಟ್ರದ ಹೆಮ್ಮೆ. ಮುಂದಿನ ವರ್ಷಗಳಲ್ಲಿ ಬೆಂಗಳೂರು ಸಿಲಿಕಾನ್ ವ್ಯಾಲಿ ಆಗಲಿದೆ.
ರಫೇಲ್ ಯುದ್ಧ ವಿಮಾನದ ಟೆಂಡರ್ ಎಚ್ಎಎಲ್ಗೆ ಸಿಗಬೇಕಿತ್ತು. ಆದರೆ ಅದು ಎಚ್ಎಎಲ್ ಕೈ ತಪ್ಪಿದೆ. 45 ಸಾವಿರ ಕೋಟಿಯ ಟೆಂಡರ್ ಅನ್ನು ಬೇರೆಯವರಿಗೆ ನೀಡಲಾಗಿದೆ. ಇದು ಉದ್ಯೋಗ ಸೃಷ್ಟಿಯೂ ಇಲ್ಲವಾಗಿದೆ ಎಂದು ಕೇಂದ್ರದ ವಿರುದ್ಧ ಆರೋಪಿಸಿದರು. ತೈಲ ಬ್ಯಾರಲ್ ಬೆಲೆ 140 ಡಾಲರ್ನಿಂದ 70 ಡಾಲರ್ಗೆ ಇಳಿದಿದೆ. ಆದರೂ ಪೆಟ್ರೋಲ್ ಬೆಲೆ ಕಡಿಮೆ ಮಾಡಿಲ್ಲ. ಇದರಿಂದ ದೇಶದ ಜನರಿಗೆ ಮತ್ತಷ್ಟು ಹೊರೆಯಾಗಿದೆ.
ದಲಿತರಿಗೆ ದೇಶದಲ್ಲಿ ರಕ್ಷಣೆಯಿಲ್ಲದಂತಾಗಿದೆ. ಉತ್ತರ ಪ್ರದೇಶದಲ್ಲಿ ದಲಿತರ ಮೇಲಿನ ಹಲ್ಲೆ ನಿಂತಿಲ್ಲ. ಅದನ್ನು ತಡೆಯಲು ಪ್ರಧಾನಿ ವಿಫಲರಾಗಿದ್ದಾರೆ. ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ ಎಂದು ನಾವು ಹೇಳುತ್ತಲೇ ಇದ್ದೇವೆ. ರೋಹಿತ್ ವೆಮುಲಾರನ್ನು ಹತ್ಯೆ ಮಾಡಲಾಯಿತು. ಈ ಪ್ರಕರಣದ ಬಗ್ಗೆ ಮೋದಿ ಒಂದು ಮಾತನ್ನು ಹೇಳಲಿಲ್ಲ. ದೇಶದಲ್ಲಿ ದಲಿತರ ಹತ್ಯೆ ಹಾಗೂ ಅವಮಾನ ಮಾಡುತ್ತಿದ್ದರೂ ಮೋದಿಯವರು ಏನ್ನೂ ಮಾತನಾಡುವುದಿಲ್ಲ. ದಲಿತರ ಹಕ್ಕುಗಳು ಹಾಗೂ ಅವರ ಮೇಲಿನ ದೌರ್ಜನ್ಯ ಕುರಿತು ಕಾಂಗ್ರೆಸ್ ಹೋರಾಟವನ್ನು ಮುಂದುವರೆಸಲಿದೆ. ಮಹಿಳೆಯರ ಮೇಲಿನ ದೌರ್ಜನ್ಯ ರಾಜಕೀಯ ಹಾಗೂ ರಾಷ್ಟ್ರೀಯ ವಿಚಾರ. ಬುಲೆಟ್ ರೈಲುಗಳ ಬಗ್ಗೆ ಚರ್ಚೆ ನಡೆಸಲು ಇಚ್ಛಿಸುವ ಪ್ರಧಾನಿ ಮೋದಿಯವರು ದೇಶದ ಮೂಲಭೂತ ವಿಚಾರಗಳ ಬಗ್ಗೆ ಮಾತ್ರ ಚರ್ಚಿಸಲು ಇಚ್ಛಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
karnataka assembly election,Rahul gandhi,