ಕ್ರೈಸ್ತರ ಅಭಿವೃಧ್ದಿ ಸಮಿತಿಗೆ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನವನ್ನು ಸಮಿತಿ ದುರ್ಬಳಕೆ ಮಾಡಿಕೊಂಡಿದೆ

ಬೆಂಗಳೂರು, ಮೇ 9-ಕರ್ನಾಟಕ ಕ್ರೈಸ್ತರ ಅಭಿವೃಧ್ದಿ ಸಮಿತಿಗೆ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನವನ್ನು ಸಮಿತಿ ದುರ್ಬಳಕೆ ಮಾಡಿಕೊಂಡಿದೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ಕ್ರೈಸ್ತರ ಘಟಕ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಕ್ರೈಸ್ತ ಘಟಕದ ರಾಜ್ಯ ಉಪಾಧ್ಯಕ್ಷ ಭಾಸ್ಕರ್‍ಬಾಬು, ಪಾತರಪಲ್ಲಿ, ಕ್ರೈಸ್ತ ಅಭಿವೃದ್ಧಿ ಸಮಿತಿಗೆ ಸಚಿವ ಕೆ.ಜೆ.ಜಾರ್ಜ್ ಅವರು ಅಧ್ಯಕ್ಷರಾಗಿದ್ದು, ಪರಿಣಿತರಲ್ಲದ ವ್ಯಕ್ತಿಗಳನ್ನು ಸಮಿತಿಯ ಸದಸ್ಯರಾಗಿ ನೇಮಕ ಮಾಡಲಾಗಿದೆ. ಈ ಸಮಿತಿ ಕಾನೂನು ಬದ್ಧವಾಗಿ ನೋಂದಣಿಯಾಗದ ಕ್ರೈಸ್ತ ಸಂಸ್ಥೆಗೆ 1.70 ಕೋಟಿ ಅನುದಾನ ಬಿಡುಗಡೆ ಮಾಡಿ ಕಮಿಷನ್ ಪಡೆದುಕೊಂಡಿದೆ ಎಂದು ಆರೋಪಿಸಿದರು.

ಹುಮ್ನಾಬಾದ್ ತಾಲೂಕಿನ ಸಮುದಾಯ ಭವನಕ್ಕೆ 50 ಲಕ್ಷ, ಅದೇ ಪಟ್ಟಣದ ಮೆಥೆಡಿಸ್ಟ್ ಚರ್ಚ್ ನವೀಕರಣಕ್ಕೆ 10 ಲಕ್ಷ, ಮುಸ್ತಾಪುರ ತಾಲೂಕಿನ ಸಮುದಾಯ ಭವನಕ್ಕೆ 50 ಲಕ್ಷ, ಸಿವಂತ್ ಡೇ ಚರ್ಚ್ ನವೀಕರಣಕ್ಕೆ 10 ಲಕ್ಷ, ಬೀದರ್ ತಾಲೂಕಿನ ಸಮುದಾಯ ಭವನಕ್ಕೆ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಆದರೆ ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು.

ಈ ಅನುದಾನ ಬಳಕೆಗೆ ಸಂಬಂಧಿಸಿದಂತೆ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಕ್ರೈಸ್ತ ಘಟಕದ ರಾಜ್ಯಾಧ್ಯಕ್ಷ ಚಂದ್ರ, ಮಹಾ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ