ರಾಷ್ಟ್ರ ರಾಜಧಾನಿಗೆ ಅಪ್ಪಳಿಸಿದ ಚಂಡಮಾರುತ: ಬಿರುಗಾಳಿಯೊಂದಿಗೆ ಭಾರೀ ಮಳೆ; 20 ರಾಜ್ಯಗಳಲ್ಲಿ ಕಟ್ಟೆಚ್ಚರ

ನವದೆಹಲಿ:ಮೇ-8: ರಾಜಧಾನಿ ದೆಹಲಿಗೆ ಚಂಡಮಾರುತ ಅಪ್ಪಳಿಸಿದ್ದು, 20 ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ರಾತ್ರಿ 11:20ರ ಸುಮಾರಿಗೆ ದೆಹಲಿ ಭಾಗದಲ್ಲಿ ಗಂಟೆಗೆ 70 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಿದೆ. ದೂಳು ಬಿರುಗಾಳಿಯ ಅಬ್ಬರಕ್ಕೆ ವಿದ್ಯುತ್‌ ಕಂಬಗಳು ಉರುಳಿವೆ, ಮರಗಳು ಬುಡಮೇಲಾಗಿಬಿದ್ದಿವೆ.

ಬಿರುಗಾಳಿ ಆರಂಭಕ್ಕೂ ಮುನ್ನ ದೆಹಲಿ–ಚಂಡೀಗಢ ಪ್ರದೇಶದಲ್ಲಿ ದಿನದ ಉಷ್ಣಾಂಶ 39.6 ಡಿಗ್ರಿ ಸೆಲ್ಸಿಯಸ್‌ ತಲುಪಿತ್ತು. ಈ ಕಾಲದ ಸರಾಸರಿ ಉಷ್ಣತೆಗಿಂತಲೂ ಸೋಮವಾರ ಉಷ್ಣಾಂಶ ಹೆಚ್ಚಿತ್ತು ಎನ್ನಲಾಗಿದೆ.

ಭಾರೀ ಬಿರುಗಾಳಿ ಜತೆಗೆ ಗುಡುಗು ಮಿಂಚು, ಸಹಿತ ಭಾರಿ ಮಳೆಯಾಗಿದೆ. ದೆಹಲಿ, ಚಂಡೀಘಡ, ಉತ್ತರಾಖಂಡದಲ್ಲೂ ಭಾರಿ ಮಳೆಯಾಗಿದೆ ಎಂದು ತಿಳಿದುಬಂದಿದೆ. ಇನ್ನು ಉತ್ತರಾಖಂಡದಲ್ಲಿ ಮಳೆಯಿಂದಾಗಿ ಇಬ್ಬರು ಯಾತ್ರಿಗಳು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತ ದೆಹಲಿಯಲ್ಲಿ ಚಂಡಮಾರುತದಿಂದಾಗಿ ದೆಹಲಿ ಮೆಟ್ರೋ ಸಂಚಾರ ತೀವ್ರ ಅಸ್ತವ್ಯಸ್ಥವಾಗಿದ್ದು, ತೀವ್ರ ಕಟ್ಟೆಚ್ಚರದ ನಡುವೆ ರೈಲು ಸಂಚಾರ ನಡೆಸುವಂತೆ ಎಚ್ಚರಿಕೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ರೈಲಿನ ವೇಗ ಪ್ರತೀ ಗಂಟೆಗೆ 15 ಕಿ.ಮೀಗೂ ಹೆಚ್ಚಾಗದಂತೆ ರೈಲಿನ ಪೈಲಟ್ ಗಳಿಗೆ ಸೂಚನೆ ನೀಡಲಾಗಿದೆ. ಇನ್ನು ಚಂಡಮಾರುತದಿಂದಾಗಿ ದೆಹಲಿಯ ಬಹುತೇಕ ನಿಲ್ದಾಣಗಳಲ್ಲಿ ಮೆಟ್ರೋ ರೈಲುಗಳು ಸಂಚಾರ ಸ್ಥಗಿತಗೊಳಿಸಿದ್ದವು. ಚಂಡಮಾರುತ ಗಂಟೆಗೆ 90 ವೇಗದಲ್ಲಿ ಬೀಸುತ್ತಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮೆಟ್ರೋ ರೈಲುಗಳನ್ನು ಸ್ಥಗಿತಗೊಳಿಸಲಾಗಿತ್ತು.

ರಾಜಧಾನಿ ದೆಹಲಿಯಲ್ಲಿ ಚಂಡಮಾರುತ ಅಪ್ಪಳಿಸುತ್ತಿದ್ದಂತೆಯೇ ಹವಾಮಾನ ಇಲಾಖೆ 20 ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ಪಂಜಾಬ್, ಹರಿಯಾಣ, ಚಂಡೀಘಡ, ದೆಹಲಿ, ಬಿಹಾರ, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಉತ್ತರ ಪ್ರದೇಶ, ಜಾರ್ಖಂಡ್, ಸಿಕ್ಕಿಂ, ಒಡಿಶಾ, ತೆಲಂಗಾಣ, ಉತ್ತರ ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಉಳಿದಂತೆ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬುಧವಾರದವರೆಗೂ ಈ 20 ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆಯುತ್ತದೆ ಎಂದು ಹವಮಾನ ಇಲಾಖೆ ಸ್ಪಷ್ಟಪಡಿಸಿದೆ.
Thunderstorm,Hit Delhi, 20 States On Alert

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ