ಹೈವೋಲ್ಟೇಜ್ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ದೇವೇಗೌಡ:

ಬಾದಾಮಿ, ಮೇ 7- ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಭವಿಷ್ಯದ ಉಪಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರ ಜಟ್ಟಿ ಕಾಳಗದ ಹೈವೋಲ್ಟೇಜ್ ಕ್ಷೇತ್ರಕ್ಕೆ ಇಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಲಗ್ಗೆಯಿಟ್ಟು ಪಕ್ಷದ ಪರ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.
ಬೆಂಗಳೂರಿನಿಂದ ನೇರವಾಗಿ ಇಲ್ಲಿಗೆ ಹೆಲಿಕಾಪ್ಟರ್‍ನಲ್ಲಿ ಬಂದಿಳಿದ ಅವರು ಸೀದಾ ಬನಶಂಕರಿ ದೇವಾಲಯಕ್ಕೆ ಪೂಜೆ ಸಲ್ಲಿಸಿದರು. ನಂತರ ಅಲ್ಲಿಂದ ಶಿವಯೋಗಿ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡಿದರು. ಪಕ್ಷದ ಅಭ್ಯರ್ಥಿ ಹಣಮಂತ ಮಾವಿನಮರದ ಪರ ಮತಯಾಚಿಸಲು ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಲಿದ್ದಾರೆ.
ಈಗಾಗಲೇ ಅಪಾರ ಅಭಿಮಾನಿಗಳು ಪಟ್ಟಣದಲ್ಲಿ ಜಮಾಯಿಸಿದ್ದು ದೇವೇಗೌಡರಿಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ. ಪದೇ ಪದೇ ಏಕವಚನ ಪ್ರಯೋಗಿಸಿ ತಮ್ಮ ವಿರುದ್ಧ ಬಾಣ ಬಿಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌಡರು ಯಾವ ರೀತಿಯ ಪ್ರತ್ಯಾಸ್ತ್ರ ಬಿಡಲಿದ್ದಾರೆ ಎಂಬುದು ಇಲ್ಲಿನ ಜನರ ಕುತೂಹಲ ಕೆರಳಿಸಿದೆ. ಒಟ್ಟಾರೆ ದೇವೇಗೌಡರ ಪ್ರಚಾರದಿಂದ ಅಭ್ಯರ್ಥಿ ಮಾವಿನ ಮರದ ಅವರಿಗೆ ಅನೆಬಲ ಬಂದಂತಾಗಿದ್ದು ಕಾರ್ಯಕರ್ತರಲ್ಲಿ ಉತ್ಸಾಹ ಮತ್ತು ಹುರುಪು ಇಮ್ಮಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ