ಮದಕರಿ ನಾಯಕ, ಓಬವ್ವಳ ಸಾಧನೆ ಮರೆತ ಕಾಂಗ್ರೆಸ್ ಸುಲ್ತಾನರ ಜಯಂತಿ ಆಚರಿಸಿ ಕೋಟೆ ಜನರಿಗೆ ಅವಮಾನ ಮಾಡಿದೆ: ಪ್ರಧಾನಿ ಮೋದಿ

ಚಿತ್ರದುರ್ಗ:ಮೇ-6; ಮದಕರಿ ನಾಯಕ, ಓಬವ್ವಳ ಸಾಧನೆ ಮರೆತಿರುವ ಕಾಂಗ್ರೆಸ್ ಸರ್ಕಾರ ಮತಕ್ಕಾಗಿ ಸುಲ್ತಾನರ ಜಯಂತಿಯನ್ನು ಆಚರಣೆ ಮಾಡುತ್ತಿದೆ. ಈ ಮೂಲಕ ಚಿತ್ರದುರ್ಗದ ಜನತೆಗೆ ಕಾಂಗ್ರೆಸ್ ಸರ್ಕಾರ ಅವಮಾನ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಕೋಟೆ ನಾಡು ಚಿತ್ರದುರ್ಗದಲ್ಲಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದರು. ಕಾಂಗ್ರೆಸ್‌ ಕೇವಲ ವೋಟ್‌ ಬ್ಯಾಂಕ್‌ಗಾಗಿ ಮಾತ್ರ ಜಯಂತಿಗಳನ್ನು ಆಚರಿಸುತ್ತಿದೆ.ಮದಕರಿ ನಾಯಕ , ಓಬವ್ವಳನ್ನು ಕೊಂದವರ ಜಯಂತಿ ಆಚರಣೆ ಮಾಡಿ ಸರ್ಕಾರ ಚಿಈ ಭಾಗದ ಜನರಿಗೆ ಅವಮಾನ ಮಾಡಿದೆ ಎಂಬು ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

‘ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನೂ ಕಾಂಗ್ರೆಸ್‌ ಅವಮಾನ ಮಾಡಿತ್ತು. ಅಂಬೇಡ್ಕರ್‌ ಅವರು ನಮ್ಮನ್ನಗಲಿ ಎಷ್ಟೋ ವರ್ಷಗಳ ನಂತರ ವಾಜಪೇಯಿ ಅವರು ಅವರಿಗೆ ಭಾರತ ರತ್ನ ನೀಡಬೇಕಾಯಿತು, ಕಾಂಗ್ರೆಸ್‌ ಆ ಕೆಲಸ ಮಾಡಲಿಲ್ಲ ಎಂದರು. ಇನ್ನು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ , ದೊಡ್ಡ ನಾಯಕ ಎಸ್‌. ನಿಜಲಿಂಗಪ್ಪ ಅವರನ್ನು ಕಾಂಗ್ರೆಸ್‌ ನ ಪರಿವಾರ ಯಾವ ರೀತಿ ಅಪಮಾನ ಮಾಡಿದೆ ಎನ್ನುವುದನ್ನು ಯುವಕರು ನೆನಪಿಸಿಕೊಳ್ಳಬೇಕಾಗಿದೆ. ಯಾವುದೇ ಅವಕಾಶಗಳನ್ನು ನೀಡದೆ ಅವರನ್ನು ಬದಿಗೆ ಸರಿಸಿದರು. ಅವರು ಮಾಡಿದ ತಪ್ಪಾದರೂ ಏನು? ಬೇರೆ ಯಾವುದೂ ಅಲ್ಲ. ನೆಹರು ತಪ್ಪು ನೀತಿಗಳ ವಿರುದ್ಧ , ಆರ್ಥಿಕ ನೀತಿಗಳ ವಿರುದ್ಧ ಸವಾಲು ಎತ್ತಿದ್ದರು ಅದು ಮಾತ್ರ ಅವರ ತಪ್ಪಾಯಿತು ಎಂದರು.

ನಾವು ಜಾತಿ ಧರ್ಮ ನೋಡುವುದಿಲ್ಲ,ಮಹಾನ್‌ ವಿಜ್ಞಾನಿ ಎಪಿಜೆ ಅಬ್ದುಲ್‌ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದೆವು. ನಾನು ಪ್ರಧಾನಿ ಅದ ಬಳಿಕ ಬಡ ದಲಿತ ಸಮುದಾಯದಲ್ಲಿ ಹುಟ್ಟಿದ ರಾಮ್‌ನಾಥ್‌ ಕೋವಿಂದ್‌ ಅವರನ್ನು ರಾಷ್ಟ್ರಪತಿ ಮಾಡಿ ನಮ್ಮ ಬದ್ಧತೆ ತೋರಿಸಿದ್ದೇವೆ. ಪ್ರಧಾನಿಯೂ ಬಡ ಸಣ್ಣ ಕುಟುಂಬದಿಂದ ಬಂದವರು, ರಾಷ್ಟ್ರಪತಿಯೂ ಬಡ ದಲಿತ ಸಮುದಾಯದಿಂದ ಬಂದವರು.ನಮ್ಮ ವೋಟ್‌ ಬ್ಯಾಂಕ್‌ ಭಂಗವಾಯಿತು ಎಂಬ ಆತಂಕ ಈಗ ಕಾಂಗ್ರೆಸ್ ನಲ್ಲಿ ಆರಂಭವಾಗಿದೆ ಎಂದರು.

 

karnataka assembly election,Chitradurga,BJP,PM Narendra modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ