
ಬೆಂಗಳೂರು:ಮೇ3: ರಾಜ್ಯದಲ್ಲಿ ನಮಗೆ ನೀರಿನ ಕೊರತೆ ಇದೆ. ಹೀಗಿರುವಾಗ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ತಮಿಳುನಾಡಿಗೆ 4 ಟಿಎಂಸಿ ನೀಋ ಬಿಡುವಂತೆ ಇಂದು ಸುಪ್ರೀಂಕೋರ್ಟ್ ಆದೇಶ ನೀಡಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ರಾಜ್ಯದ ನಾಲ್ಕು ಅಣೆಕಟ್ಟುಗಳಲ್ಲಿ 9 ಟಿಎಂಸಿ ನೀರು ಮಾತ್ರ ಇದೆ. ನಮಗೆ ಕುಡಿಯಲು ಹಾಗೂ ಬೆಳೆಗಳಿಗೆ ನೀರು ಸಾಲುವುದಿಲ್ಲ. ನಮಗೆ ನೀರಿನ ಕೊರತೆ ಸಾಕಷ್ಟಿದೆ. ಹೀಗಾಗಿ, ನೀರು ಬಿಡುಗಡೆ ಅಸಾಧ್ಯ ಎಂದು ಸ್ಪಷ್ಟಪಡಿಸಿದರು.
ತಮಿಳುನಾಡಿಗೆ 4 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಆದರೆ, ಯಾವ ರೀತಿ ನ್ಯಾಯಾಲಯ ಆದೇಶ ನೀಡಿದೆ ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ನ್ಯಾಯಾಲಯಕ್ಕೆ ನೀರಿನ ಕೊರತೆ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ ಎಂದರು.
Cauvery water Issue,M B Patil,Supreme Court