ನವದೆಹಲಿ:ಮೇ-3: ತಮಿಳುನಾಡಿಗೆ ಮತ್ತೆ 4 ಟಿಎಂಸಿ ನೀರು ಬಿಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಕೋರ್ಟ್ ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಾಪೀಠ ತಮಿಳುನಾಡು ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ನಡೆಸಿದ್ದು, ಕೂಡಲೇ ತಮಿಳುನಾಡಿಗೆ 4 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಆದೇಶ ನೀಡಿದೆ. ಅಲ್ಲದೇ ನ್ಯಾಯಾಲಯಕ್ಕೆ 10 ದಿನಗಳೊಳಗೆ ಕರಡು ಸ್ಕೀಂ (ಕಾವೇರಿ ನೀರು ಹಂಚಿಕೆಗೆ ಯೋಜನೆ) ಸಲ್ಲಿಸುವಂತೆಯೂ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ.
ಫೆ. 16ರಂದು ಪ್ರಕಟಿಸಿದ ಅಂತಿಮ ತೀರ್ಪಿನಲ್ಲಿ ನೀರು ಹಂಚಿಕೆಗೆ ಸ್ಕೀಂ ರಚಿಸಲು ಕೇಂದ್ರ ಸರಕಾರಕ್ಕೆ ಆರು ವಾರಗಳ ಗಡುವು ನೀಡಿತ್ತು. ನಿಗದಿತ ಅವಧಿಯೊಳಗೆ ಸ್ಕೀಂ ರಚಿಸದ ಸರಕಾರ, ಗಡುವು ಅಂತ್ಯವಾಗುವ ಕೊನೆಯ ದಿನವಾದ ಏ.9ಕ್ಕೆ ಸ್ಕೀಂ ರಚನೆಗೆ ಮೂರು ತಿಂಗಳು ಹೆಚ್ಚುವರಿ ಕಾಲಾವಕಾಶ ಕೋರುವುದರ ಜತೆಗೆ ಸ್ಕೀಂನ ವ್ಯಾಖ್ಯೆಯ ಬಗ್ಗೆ ಸ್ಪಷ್ಟೀಕರಣ ಕೋರಿ ಅರ್ಜಿ ಸಲ್ಲಿಸಿತ್ತು. ಆಗ ಈ ಅರ್ಜಿಗೆ ಒಪ್ಪದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಗಡುವಿನೊಳಗೆ ಸ್ಕೀಂ ರಚನೆ ಮಾಡದ ಕೇಂದ್ರದ ವಿಳಂಬ ನೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತಲ್ಲದೇ ಮೇ 3ಕ್ಕೆ ಸ್ಕೀಂ ರಚನೆ ಮಾಡಲೇಬೇಕೆಂದು ಖಡಕ್ ಸೂಚನೆ ನೀಡಿತ್ತು.
ಕರ್ನಾಟಕ ಚುನಾವಣೆಗೆ ಮುನ್ನ ಸ್ಕೀಂ ರೂಪಿಸುವ ಇಕ್ಕಟ್ಟಿನಿಂದ ಪಾರಾಗಬೇಕೆಂಬ ಆಲೋಚನೆಯಲ್ಲಿರುವ ಕೇಂದ್ರ ಸರಕಾರ, ಒಂದೆಡೆ ತಮಿಳುನಾಡಿನ ನ್ಯಾಯಾಂಗ ನಿಂದನೆ ಅರ್ಜಿಯ ತೂಗುಗತ್ತಿಯನ್ನು ಎದುರಿಸುತ್ತಿದ್ದರೆ, ಇನ್ನೊಂದೆಡೆ ಗಡುವಿನೊಳಗೇ ಸ್ಕೀಂ ರಚನೆ ಮಾಡದೇ ಇರುವುದಕ್ಕೆ ಸುಪ್ರೀಂ ಕೋರ್ಟ್ನ ಕೆಂಗಣ್ಣಿಗೂ ಗುರಿಯಾಗಬೇಕಿದೆ. ಈ ಎರಡೂ ಸ್ಥಿತಿಯಿಂದ ಪಾರಾಗಲು ಸ್ಕೀಂ ರೂಪಿಸಲು ಇನ್ನೂ ಎರಡು ವಾರಗಳ ಕಾಲಾವಕಾಶಕ್ಕೆ ಹಿಂದಿನ ವಿಚಾರಣೆ ವೇಳೆ ಕೇಂದ್ರ ಸರಕಾರ ಕೋರಿತ್ತಾದರೂ ಅದಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡದೇ ಮೇ 3ಕ್ಕೆ ನಿಗದಿಯಾಗಿರುವ ವಿಚಾರಣೆಯ ವೇಳೆಯೇ ಈ ಅರ್ಜಿಯನ್ನು ಕೈಗೆತ್ತಿಕೊಳ್ಳಲಾಗುವುದು. ಅಲ್ಲಿಯವರೆಗೆ ಈಗಾಗಲೇ ನೀಡಿರುವ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿತು.
ಈ ನಿಟ್ಟಿನಲ್ಲಿ ಇಂದು ವಿಚಾರನೆ ನಡೆಸಿದ ನ್ಯಾಯಪೀಠ, ತಮಿಳುನಾಡಿಗೆ 4 ಟಿಎಂಸಿ ಕಾವೇರಿ ನೀರು ಬಿಡಿ ಇಲ್ಲ ಪರಿಣಾಮ ಎದುರಿಸಿ ಎಂದು ಕರ್ನಾಟಕ ಸರಕಾರಕ್ಕೆ ಆದೇಶ ನೀಡಿದೆ. ಅಲ್ಲದೇ ಇದಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಬೇಕೆಂದು ಕೇಂದ್ರಕ್ಕೆ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಪೀಠ ನಿರ್ದೇಶಿಸಿದೆ. ಮುಂದಿನ ವಿಚಾರಣೆ ಮೇ.8ಕ್ಕೆ ಮುಂದೂಡಲಾಗಿದೆ.
Cauvery water Issue, Supreme Court,asked Karnataka, to release 4 tmc to Tamil Nadu