ಅನಕ್ಷರಸ್ಥ ಸಮುದಾಯಗಳಲ್ಲಿ ಹುದುಗಿರುವ ಮಹಾಕಾವ್ಯ ಪರಂಪರೆಯನ್ನು ಜಗತ್ತಿನ ಗಮನಕ್ಕೆ ತರುವುದು ಇಂದಿನ ತುರ್ತು: ಡಾ.ಕೆ.ಆರ್.ದುರ್ಗಾದಾಸ್ ಅಭಿಪ್ರಾಯ

ಬೆಂಗಳೂರು, ಮೇ 2-ಅನಕ್ಷರಸ್ಥ ಸಮುದಾಯಗಳಲ್ಲಿ ಹುದುಗಿರುವ ಮಹಾಕಾವ್ಯ ಪರಂಪರೆಯನ್ನು ಜಗತ್ತಿನ ಗಮನಕ್ಕೆ ತರುವುದು ಇಂದಿನ ತುರ್ತು ಎಂದು ಕನ್ನಡ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರಾದ ಡಾ.ಕೆ.ಆರ್.ದುರ್ಗಾದಾಸ್ ಅಭಿಪ್ರಾಯಪಟ್ಟರು.

ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರ ಹಾಗೂ ಜಾನಪದ ಪರಿಷತ್ತು ಸಹಯೋಗದಲ್ಲಿ ಆಯೋಜಿಸಿದ್ದ ಜನಪದ ಮಹಾಕಾವ್ಯ: ಶ್ರೀಮಲೆಮಾದೇಶ್ವರ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಾತನಾಡಿದರು.

ಕನ್ನಡ ಅಧ್ಯಯನ ಕೇಂದ್ರ ನಿರ್ದೇಶಕರಾದ ಡಾ.ಬಿ.ಗಂಗಾಧರ ಮಾತನಾಡಿ, ಜಾನಪದ ಮಹಾಕಾವ್ಯಗಳು ದಮನಿತ ಸಮುದಾಯಗಳ ಆತ್ಮಾಭಿಮಾನವನ್ನು ಹೆಚ್ಚಿಸುವ ಆತ್ಮವಿಶ್ವಾಸವನ್ನು ವೃದ್ಧಿಸುವ ಸಾಮಥ್ರ್ಯವನ್ನು ಹೊಂದಿವೆ. ಈ ನೆಲೆಯಲ್ಲಿ ನಡೆಯುವ ಅಧ್ಯಯನ ಕೇಂದ್ರವು ಮಹಾಕಾವ್ಯಗಳನ್ನು ಕುರಿತ ವಿಚಾರಸಂಕಿರಣ ಮಾಲಿಕೆಯನ್ನು ಹಮ್ಮಿಕೊಂಡಿದ್ದು, ಈ ಮಾಲಿಕೆಯ ಮೊದಲ ವಿಚಾರಸಂಕಿರಣ ಮಲೆ ಮಾದೇಶ್ವರ ಮಹಾಕಾವ್ಯವನ್ನು ಕುರಿತು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕನ್ನಡದ ಮತ್ತು ಭಾರತದ ಬೇರೆ ಭಾಷಿಕ ಸಂದರ್ಭಗಳಲ್ಲಿ ಮುಖ್ಯವಾಗಿರುವ ಜನಪದ ಮಹಾಕಾವ್ಯಗಳನ್ನು ಕುರಿತು ವಿಚಾರಸಂಕಿರಣಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ಡಾ.ಐ.ಎಸ್.ಶಿವಕುಮಾರ್ ಮಾತನಾಡಿ, ಕುರಿತೋದದೆಯುಂ ಕಾವ್ಯಪ್ರಯೋಗ ಪರಣತಮತಿಗಳ್ ಎಂಬ ಮಾತುಗಳನ್ನು ಶ್ರೀ ವಿಜಯನು ನಮ್ಮ ಜನಪದ ಸಾಹಿತ್ಯದ ಶ್ರೀಮಂತಿಕೆಯನ್ನು ಕಂಡು ಕನ್ನಡದ ಅಭಿಮಾನವನ್ನು ಪ್ರತಿಭಾಸಂಪನ್ನತೆಯನ್ನ ಅನಕ್ಷರಸ್ಥರ ವೈಚಾರಿಕ ಶ್ರೀಮಂತಿಕೆಯನ್ನು ಕಂಡು ಈ ಮಾತುಗಳನ್ನು ಆಡಿರಬಹುದು ಎಂದು ಅಭಿಪ್ರಾಯಪಟ್ಟರು.

ಕುಲಸಚಿವ ಡಾ.ಬಿ.ಕೆ.ರವಿ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಜಾನಪದದ ಸಹಜತೆಗೆ ಧಕ್ಕೆಯನ್ನುಂಟು ಮಾಡುವ ಪ್ರವೃತ್ತಿ ವಾಣಿಜ್ಯೋದ್ದೇಶವನ್ನು ಹೊಂದಿರುವ ಕೆಲವು ಅಭಿರುಚಿ ಹೀನ ವಲಯಗಳಿಂದಾಗಿ ವ್ಯಾಪಕವಾಗಿ ಸಂಭವಿಸುತ್ತಿರುವುದರ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದರು.

ವಿವಿಧ ಬಗೆಯ ವಿವಿಗಳಿಂದ ಆಗಮಿಸಿದ್ದ ಅಧ್ಯಾಪಕರು ಸಂಶೋಧನಾ ವಿದ್ಯಾರ್ಥಿಗಳು ಸಮಾನಾಂತರ ಗೋಷ್ಠಿಗಳಲ್ಲಿ ಪ್ರಬಂಧಗಳನ್ನು ಮಂಡಿಸಿದರು.
ಮುಖ್ಯಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನಾಡಿನ ಪ್ರಸಿದ್ಧ ವಿದ್ವಾಂಸರಾದ ಡಾ.ಮೊಗಳ್ಳಿ ಗಣೇಶ್, ಡಾ.ಚೆಲುವರಾಜು, ಡಾ.ಭೆರಮಂಗಲ ರಾಮೇಗೌಡ, ಡಾ.ಎಚ್.ದಂಡಪ್ಪ, ಡಾ.ಚೆಲುವರಾಜು,ಡಾ.ಕರೀಗೌಡ ಬೀಚನಹಳ್ಳಿ ಮೊದಲಾದವರು ವಿಚಾರ ಮಂಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ