ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ದೆಹಲಿಯಲ್ಲಿ ಹೋರಾಟ:

ಹುಬ್ಬಳ್ಳಿ, ಮೇ 1- ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಮಹದಾಯಿ ಹೋರಾಟಗಾರರು ದೆಹಲಿಯಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.
ಏ.25ರಂದು ರೈತಸೇನಾ ಅಧ್ಯಕ್ಷರ ನೇತೃತ್ವದಲ್ಲಿ ನವಲಗುಂದ, ಹುಬ್ಬಳ್ಳಿ ಹಾಗೂ ನರಗುಂದ ಭಾಗದ ನೂರಾರು ರೈತರು ದೆಹಲಿಗೆ ಪ್ರಯಾಣ ಬೆಳೆಸಿದ್ದರು.
ಕಳೆದ ನಾಲ್ಕು ದಿನಗಳಿಂದ ಮಹದಾಯಿ ಯೋಜನೆ ಜಾರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಧ್ಯ ಪ್ರವೇಶಿಸಬೇಕು. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯೋಜನೆ ಜಾರಿ ಮಾಡುವಂತೆ ಆದೇಶ ನೀಡಬೇಕೆಂದು ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದಿದ್ದಾರೆ.
ನಿನ್ನೆ ರೈತರು ನವದೆಹಲಿಯಲ್ಲಿನ ವಿಶ್ವ ಹಿಂದೂ ಪರಿಷತ್ ಭವನದಿಂದ ಸಂಸತ್‍ವರೆಗೆ ಪಾದಯಾತ್ರೆ ಮಾಡಿದ್ದರು. ರಾಷ್ಟ್ರಪತಿಯವರ ಭೇಟಿಗೆ ಕಾಲಾವಕಾಶ ಕೇಳಿದ್ದು, ಅವರು ಭೇಟಿಗೆ ಅವಕಾಶ ನೀಡಿದ ಕೂಡಲೇ ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸಲಿದ್ದಾರೆ. ಒಂದು ವೇಳೆ ಯೋಜನೆ ಜಾರಿ ಮಾಡದಿದ್ದರೆ ದಯಾಮರಣವನ್ನಾದರೂ ಕರುಣಿಸಬೇಕೆಂದು ರಾಷ್ಟ್ರಪತಿಗಳಲ್ಲಿ ರೈತರು ಮೊರೆಯಿಡಲಿದ್ದಾರೆ.
ಹೋರಾಟಗಾರರಾದ ವೀರೇಶ್ ಸೊಬ್ರದಮಠ್, ಲೋಕನಾಥ್ ಹೆಬಸೂರು, ಶಂಕರಪ್ಪ ಅಂಬಲಿ ನೇತೃತ್ವ ವಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ