ಹಣ ದುರ್ಬಳಕೆ ಮತ್ತು ಅಕ್ರಮ ಸಾಗಣೆಗಳ ಮೇಲೆ ಚುನಾವಣಾ ಆಯೋಗ ನಿಗಾ: ಈವರೆಗೆ 19.96 ಕೋಟಿ ನಗದು ಹಾಗೂ 4.81 ಕೋಟಿ ರೂ. ಚಿನ್ನಾಭರಣಗಳ ವಶ

ಬೆಂಗಳೂರು, ಮೇ 1-ಇದೇ ತಿಂಗಳ 12ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಣ ದುರ್ಬಳಕೆ ಮತ್ತು ಅಕ್ರಮ ಸಾಗಣೆಗಳ ಮೇಲೆ ಹದ್ದಿನ ಕಣ್ಣಿನ ನಿಗಾ ಇಟ್ಟಿರುವ ಚುನಾವಣಾ ಆಯೋಗ ಮತ್ತು ಆದಾಯ ತೆರಿಗೆ ಅಧಿಕಾರಿಗಳು ರಾಜ್ಯದ ವಿವಿಧೆಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಈವರೆಗೆ 19.96 ಕೋಟಿ ನಗದು ಹಾಗೂ 4.81 ಕೋಟಿ ರೂ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಏ.30ರವರೆಗೆ ಬೆಂಗಳೂರು, ಮೈಸೂರು, ದಾವಣಗೆರೆ, ಖಾನಾಪುರ, ಹುಬ್ಬಳ್ಳಿ ಮೊದಲಾದ ಸ್ಥಳಗಳಲ್ಲಿ ಆಯೋಗ ಮತ್ತು ಐಟಿ ಅಧಿಕಾರಿಗಳು ನಡೆಸಿದ ಪ್ರತ್ಯೇಕ ದಾಳಿಗಳಲ್ಲಿ ಒಟ್ಟು 19.96 ಕೋಟಿ ನಗದು ಹಾಗೂ 4.81 ಕೋಟಿ ರೂ. ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಭಾರತ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಪವನ್ ದಿವಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರಿನಲ್ಲಿ ನಾಲ್ವರು ಸರ್ಕಾರಿ ಗುತ್ತಿಗೆದಾರರಿಂದ 6.76 ಕೋಟಿ ರೂ.ಗಳ ಅಘೋಷಿತ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಗುತ್ತಿಗೆದಾರರು ಈ ಭಾರೀ ಮೊತ್ತದ ಹಣಕ್ಕೆ ದಾಖಲೆಗಳನ್ನು ಹಾಜರುಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಅದೇ ರೀತಿ ದಾವಣಗೆರೆ, ಖಾನಾಪುರ ಮತ್ತು ಹುಬ್ಬಳ್ಳಿಯ ಕೆಲವೆಡೆ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ದಾಖಲೆ ಇಲ್ಲದ ಮತ್ತು ಅಘೋಷಿತ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ