ಬಿಸಿಲಿನ ತಾಪ ಹೆಚ್ಚಳವಾಗುತ್ತಿದ್ದಂತೆ ಕುಡಿಯುವ ನೀರಿಗೂ ತೀವ್ರ ಹಾಹಾಕಾರ:

ತುರುವೇಕೆರೆ, ಏ.30-ಬಿಸಿಲಿನ ತಾಪ ಹೆಚ್ಚಳವಾಗುತ್ತಿದ್ದಂತೆ ಕುಡಿಯುವ ನೀರಿಗೂ ತೀವ್ರ ಹಾಹಾಕಾರ ಕಂಡು ಬರುತ್ತಿದ್ದು , ತಾಲ್ಲೂಕಿನ ತಾಳಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಂಡಿಕಹಳ್ಳಿ, ಗೊಲ್ಲರಹಟ್ಟಿ ಗ್ರಾಮಕ್ಕೆ ಸುಮಾರು ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು , ಹನಿ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಜನರನ್ನು ಹೊಂದಿದ್ದರು. ಕೇವಲ ಒಂದು ಕೊಳವೆ ಬಾವಿ, ಆರೇಳು ಟ್ಯಾಂಕ್‍ಗಳಿದ್ದರೂ ಸುಮಾರು ತಿಂಗಳಿನಿಂದ ಬೋರ್‍ವೆಲ್‍ನಲ್ಲಿ ಸಮರ್ಪಕವಾಗಿ ನೀರು ಬಾರದೆ ಕುಡಿಯುವ ಹನಿ ನೀರಿಗೂ ಪರಿಪಾಟಲು ಪಡುವಂತಹ ಸ್ಥಿತಿ ಬಂದಿದೆ. ಸುಮಾರು ತಿಂಗಳಿನಿಂದ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಪಿಡಿಓ ಹಾಗೂ ಇಒರವರಿಗೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರು ನೀಡಿದ್ದರು ಸಮಸ್ಯೆ ಬಗ್ಗೆ ಹರಿಸಲು ಅದಿಕಾರಿಗಳು ಮಾತ್ರ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಅವಲತ್ತುಕೊಂಡಿದ್ದಾರೆ.
ಗ್ರಾಮದ ಮುಖಂಡ ಪರಮೇಶ ಮಾತನಾಡಿ, ಗ್ರಾಮ ಪಂಚಾಯ್ತಿ ಗ್ರಾಮಕ್ಕೆ ಕುಡಿಯುವ ನೀರು ಒದಗಿಸದೆ ಸಬೂಬು ಹೇಳುತ್ತಿದ್ದು ಜನ ಜಾನುವಾರುಗಳಿಗೆ ಕುಡಿಯುವ ನೀರು ಇಲ್ಲದೇ ಪರಿತಪಿಸುವಂತಾಗಿದೆ. ಗ್ರಾಮದಲ್ಲಿ ಒಂದು ಮಾತ್ರ ಬೋರ್‍ವೆಲ್ ಇದ್ದರೂ ಸರಿಯಾಗಿ ನೀರು ಬರುವುದಿಲ್ಲ. ಓವರ್ ಟ್ಯಾಂಕ್ ನಿರ್ಮಿಸಿದ್ದರೂ ಉಪಯೋಗವಿಲ್ಲದಂತಾಗಿದೆ. ಗ್ರಾಮ ಪಂಚಾಯ್ತಿ ಗಮನಕ್ಕೆ ಅನೇಕ ಬಾರಿ ತಂದಿದ್ದರೂ ಯಾವುದೇ ಉಪಯೋಗವಾಗಿಲ್ಲ ಎಂದು ದೂರಿದ್ದಾರೆ.
ಗ್ರಾಮದ ಮಹಿಳೆ ಮಂಜುಳ ಮಾತನಾಡಿ, ಪ್ರತಿ ದಿನ ಎರಡು ಬಿಂದಿಗೆ ನೀರು ಹಿಡಿಯಲು ಗಂಟೆಗಟ್ಟಲೇ ನಿಲ್ಲಬೇಕಿದೆ. ಬೋರ್ ವೆಲ್‍ನಲ್ಲಿ ನೀರು ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದು ಕುಟುಂಬದಲ್ಲೊಬ್ಬ ಸದಸ್ಯರಿಗೆ ನೀರು ಹಿಡಿಯುವುದೇ ದಿನನಿತ್ಯದ ಕೆಲಸವಾಗಿದೆ, ಒಂದು ಕಿ.ಮೀ. ದೂರದ ಜಮೀನುಗಳಿಗೆ ತೆರಳಿದರೂ ಜಮೀನುಗಳಲ್ಲಿ ನೀರು ಸಿಗುತ್ತಿಲ್ಲ. ಶೀಘ್ರವೇ ನಮ್ಮ ಗ್ರಾಮಕ್ಕೆ ಸಮರ್ಪಕ ನೀರು ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಯಮ್ಮ, ಸಿದ್ದಗಂಗಮ್ಮ, ಶೈಲಜ, ಸಣ್ಣಮ್ಮ, ಜಯಶೀಲಾ, ಬಿಂದು, ಗೀತಾ, ಮಂಜಮ್ಮ, ಮಂಜುಳ, ಗಜ್ಜಮ್ಮ ಸೇರಿದಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ