ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ…?: ವ್ಯಾಪಕ ಚರ್ಚೆಗೆ ಕಾರಣವಾಯ್ತು ವದಂತಿ

ಬೆಂಗಳೂರು, ಏ.29- ಫೇಸ್‍ಬುಕ್ ಮಾಹಿತಿಯನ್ನು ಸೋರಿಕೆ ಮಾಡಿ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತಿ ಗಳಿಸಿರುವ ಬ್ರಿಟನ್ ಮೂಲದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಕೈಜೋಡಿಸಿದೆ ಎಂಬ ವದಂತಿಗಳು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಅಮೆರಿಕ ಅಧ್ಯಕ್ಷರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪರವಾಗಿ ಫೇಸ್‍ಬುಕ್ ಮಾಹಿತಿಯನ್ನು ಸೋರಿಕೆ ಮಾಡಿದ್ದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಜೊತೆ ಕಾಂಗ್ರೆಸ್‍ನ ಹೈಕಮಾಂಡ್‍ನ ಕೆಲ ನಾಯಕರು ನಿರಂತರ ಸಂಪರ್ಕದಲ್ಲಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಚಾರದ ಉಸ್ತುವಾರಿಯನ್ನು ವಹಿಸಿದ್ದಾರೆ ಎನ್ನಲಾಗುತ್ತಿದೆ.

ಪ್ರಾಯೋಗಿಕವಾಗಿ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕೂ ಅನಾಲಿಟಿಕಾ ಸಂಸ್ಥೆ ಸಲಹೆಗಳನ್ನು ನೀಡುತ್ತಿದೆ ಎಂಬ ವದಂತಿಗಳಿವೆ. ಇತ್ತೀಚೆಗೆ ಕಾಂಗ್ರೆಸ್ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆ ಸಿದ್ದಪಡಿಸುವ ವೇಳೆಯೂ ಅನಾಲಿಟಿಕಾ ಸಂಸ್ಥೆ ಹಸ್ತಕ್ಷೇಪ ನಡೆಸಿತ್ತು. ಹಾಗಾಗಿಯೇ ಬಹಳಷ್ಟು ಅವಾಸ್ತವಿಕವಾದ ಭರವಸೆಗಳು ಪ್ರಣಾಳಿಕೆಯಲ್ಲಿ ನುಸುಳಿವೆ ಎಂಬ ಆರೋಪಗಳಿವೆ.

ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ವಿಧಾನಸಭೆ ಚುನಾವಣೆಯಲ್ಲಿ ಮೂಗು ತೂರಿಸುವುದನ್ನು ಕಾಂಗ್ರೆಸ್ ಮೂಲಗಳು ತಳ್ಳಿ ಹಾಕುತ್ತಿವೆ. ಕಾಂಗ್ರೆಸ್‍ನಲ್ಲಿರುವ ವಿವಿಧ ಘಟಕಗಳೇ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುತ್ತಿವೆ. ಜಾಹೀರಾತು ಉಸ್ತುವಾರಿ ಹೊರತುಪಡಿಸಿ ಉಳಿದ ಯಾವುದೇ ಜವಾಬ್ದಾರಿಗಳನ್ನು ಖಾಸಗಿ ಸಂಸ್ಥೆಗಳಿಗೆ ನೀಡಿಲ್ಲ. ಹಾಗಾಗಿ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಹಸ್ತಕ್ಷೇಪ ನಡೆಸುತ್ತಿಲ್ಲ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಅದರ ಜೊತೆಯಲ್ಲೇ ಹೈಕಮಾಂಡ್ ನಾಯಕರು ಅನಾಲಿಟಿಕಾ ಸಂಸ್ಥೆ ಜೊತೆ ಸಂಪರ್ಕದಲ್ಲಿರುವುದು ನಿಜ. ಅವರು ನಮ್ಮ ರಾಜ್ಯ ನಾಯಕರಿಗೆ ಗೊತ್ತಿಲ್ಲದಂತೆ ಯಾವುದಾದರೂ ಜವಾಬ್ದಾರಿಯನ್ನು ಆ ಸಂಸ್ಥೆಗೆ ವಹಿಸಿರಬಹುದೆನೋ ಆ ಬಗ್ಗೆ ನಮಗೆ ಸ್ಪಷ್ಟ ಮಾಹಿತಿಇಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಡುತ್ತಿದ್ದಾರೆ.

ಮೂಲಗಳ ಪ್ರಕಾರ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನ ಪ್ರಚಾರದ ಉಸ್ತುವಾರಿ ಮತ್ತು ಮಾಹಿತಿ ಸಂಗ್ರಹಣೆ ಜವಾಬ್ದಾರಿ ನೋಡಿಕೊಳ್ಳಲಿದೆ. ಅದಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ವಿಧಾನಸಭೆ ಚುನಾವಣೆಯ ಜವಾಬ್ದಾರಿಯನ್ನೂ ನಿಭಾಯಿಸುತ್ತಿದೆ.
ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದಿರುವ 9 ಸರ್ವೆಗಳ ಪೈಕಿ ಅನಾಲಿಟಿಕಾ ಸಂಸ್ಥೆಯು ಒಂದು ಸರ್ವೆ ಮಾಡಿ ಕೊಟ್ಟಿದೆ. ಆ ಮಾಹಿತಿ ಆಧರಿಸಿಯೇ ಹೈಕಮಾಂಡ್ ನಾಯಕರು ವಿಧಾನಸಭಾ ಕ್ಷೇತ್ರವಾರು ಟಿಕೆಟ್‍ಗಳನ್ನು ಹಂಚಿಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ