ಮಕ್ಕಳ ಮೇಲಿನ ಅತ್ಯಾಚಾರ ಅಪರಾಧಿಗಳಿಗೆ ಮರಣದಂಡನೆ: ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ

ನವದೆಹಲಿ:ಏ-21:ಮಕ್ಕಳ ಮೇಲೆ ಅತ್ಯಾಚಾರ ನಡೆಸುವ ಅಪರಾಧಿಗಳಿಗೆ ಮರಣ ದಂಡನೆ ನೀಡುವ ಪೋಸ್ಕೋ ಕಾಯ್ದೆ ತಿದ್ದುಪಡಿ ಮಸುದೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ.

12 ವರ್ಷದವರೆಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಅಪರಾಧಿಗಳನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸ್ಕೋ) ಕಾಯ್ದೆಯಡಿ ಬಂಧಿಸಿ ಮರಣದಂಡನೆ ಜಾರಿಗೊಳಿಸಲು ಅವಕಾಶ ನೀಡುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಸಭೆ ಇಂದು ಅನುಮತಿ ನೀಡಿತು.

ಉನ್ನಾವೊ, ಕಥುವಾ ಅತ್ಯಾಚಾರ ಪ್ರಕರಣಗಳಲ್ಲಿ ದೇಶಾದ್ಯಂತ ತೀವ್ರವಾದ ಪ್ರತಿಭಟನೆಗಳು ಎದುರಾದ ಬೆನ್ನಲ್ಲೆ ಬಹುನಿರೀಕ್ಷಿತ ಸುಗ್ರೀವಾಜ್ಞೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಹಿನ್ನಲೆಯಲ್ಲಿ ಪೋಸ್ಕೋ ಕಾಯ್ದೆಯಲ್ಲಿ ಬದಲಾವಣೆಯಾಗಲಿದ್ದು, ಮಕ್ಕಳ ಮೇಲೆ ಅತ್ಯಾಚಾರ ನಡೆಸುವ ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗುತ್ತದೆ.

ಕೇಂದ್ರ ಸಚಿವ ಸಂಪುಟ ಅನುಮೋದಿಸಿರುವ ಈ ವಿಧೇಯಕವನ್ನು ಈಗಿನ್ನು ರಾಷ್ಟ್ರಪತಿಗಳ ಅನುಮೋದನೆಗಾಗಿ ಕಳುಹಿಸಲಾಗುವುದು.

ಈಗ ಜಾರಿಯಲ್ಲಿರುವ ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆ ಕಾಯಿದೆಯಡಿ (ಪೋಸ್ಕೋ) ಮಕ್ಕಳ ಮೇಲೆ ಅತ್ಯಾಚಾರ ಅಪರಾಧ ಎಸಗುವವರಿಗೆ ಕನಿಷ್ಠ 7 ವರ್ಷ ಮತ್ತು ಗರಿಷ್ಠ ಜೀವಾವಧಿ ಜೈಲು ಶಿಕ್ಷೆ ಇದೆ.

ನ್ಯಾಯಮೂರ್ತಿ ಅಲಕ್ ಅಲೋಕ್ ಶ್ರೀವಾಸ್ತವ್ ಪಿಐಎಲ್: ಪೋಸ್ಕೋ ಕಾಯ್ದೆ ತಿದ್ದುಪಡಿಗೆ ಕೇಂದ್ರ ಅನುಮತಿ:
0 ರಿಂದ 12 ರ ನಡುವಿನ ವಯಸ್ಸಿನ ಮಕ್ಕಳ ಅತ್ಯಾಚಾರ ಮತ್ತು ದೌರ್ಜನ್ಯದಲ್ಲಿ ಭಾಗಿಯಾಗುವ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ಕೋರಿ ನ್ಯಾಯಮೂರ್ತಿ ಅಲಕ್ ಅಲೋಕ್ ಶ್ರೀವಾಸ್ತವ್ ಸುಪ್ರೀಂ ಕೋರ್ಟ್ ಗೆ ಈ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಈ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದು, ಏ.21 ರಂದು ಸುಗ್ರೀವಾಜ್ಞೆ ಹೊರಡಿಸುವುದರ ಬಗ್ಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಕೇಂದ್ರ ಪ್ರತಿಕ್ರಿಯೆ ನೀಡಿತ್ತು.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಮುಂದೆ ಈ ವಿಚಾರಣೆ ನಡೆದಿದ್ದು ಏಪ್ರಿಲ್ 27 ಕ್ಕೆ ಮತ್ತಷ್ಟು ವಿಚಾರಣೆ ನಡೆಸಲು ಪೀಠ ನಿರ್ಧಾರ ತೆಗೆದುಕೊಂಡಿದೆ. ಜಮ್ಮು ಕಾಶ್ಮೀರದ ಕಥುವಾದಲ್ಲಿ ನಡೆದ ಎಂಟು ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಹಿನ್ನೆಲೆಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಪೋಸ್ಕೋ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ. ಇಂತಹಪ್ರಕರಣದಲ್ಲಿ ಭಾಗಿಯಾದ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವುದಕ್ಕೆ ಅವಕಾಶ ಕಲ್ಪಿಸುವ ಅಂಶ ಈ ತಿದ್ದುಪಡಿಯಲ್ಲಿ ಸೇರಿದೆ.

cabinet approves, ordinance-to-award,death-penalty,children raping convict

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ