ಟಿಕೆಟ್ ವಂಚಿತರು ಮತ್ತು ಆಕಾಂಕ್ಷಿಗಳ ಒತ್ತಡವನ್ನು ತಪ್ಪಿಸಿಕೊಳ್ಳಲು ರಾಜ್ಯದ ನಾಯಕರು ಬೆಂಗಳೂರು ಬಿಟ್ಟು ತಮ್ಮ ಕ್ಷೇತ್ರದತ್ತ ದೌದು

ಬೆಂಗಳೂರು, ಏ.16-ಟಿಕೆಟ್ ವಂಚಿತರು ಮತ್ತು ಆಕಾಂಕ್ಷಿಗಳ ಒತ್ತಡವನ್ನು ತಪ್ಪಿಸಿಕೊಳ್ಳಲು ರಾಜ್ಯದ ಅಗ್ರಗಣ್ಯ ನಾಯಕರು ಬೆಂಗಳೂರು ಬಿಟ್ಟು ತಮ್ಮ ಕ್ಷೇತ್ರದತ್ತ ದೌಡಾಯಿಸಿದ್ದಾರೆ.
ಹಾಲಿ ಶಾಸಕರಾದ ಬಾದಾಮಿ ಬಿ.ಬಿ.ಚಿಮ್ಮನಕಟ್ಟಿ, ಶಿರಗುಪ್ಪದ ಬಿ.ಎಂ.ನಾಗರಾಜ್, ಮಾಯಕೊಂಡದ ಶಿವಮೂರ್ತಿ ನಾಯ್ಕ್, ರಾಯಚೂರಿನ ಟಿಕೆಟ್ ಆಕಾಂಕ್ಷಿ ಸೈಯ್ಯದ್ ಯಾಸೀನ್ ಅವರು ಇಂದು ಬೆಳಗ್ಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಅದರ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯತ್ತ ಧಾವಿಸಿ ಬರಲಾರಂಭಿಸಿದರು.

ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಾ|ಜಿ.ಪರಮೇಶ್ವರ್ ಅವರ ಮನೆಗೂ ಟಿಕೆಟ್ ಆಖಾಂಕ್ಷಿಗಳು ಬರಲಾರಂಭಿಸಿದರು. ಬಾಗಲಕೋಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಡಿ.ಎಚ್.ಪೂಜಾರ್ ಅವರು ಪರಮೇಶ್ವರ್ ಅವರನ್ನು ಭೇಟಿ ಮಾಡಿ ಲೈಂಗಿಕ ಹಗರಣದಲ್ಲಿ ಸಿಲುಕಿದ್ದ ಎಚ್.ವೈ.ಮೇಟಿ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ. ನನಗೆ ಟಿಕೆಟ್ ನೀಡುವುದಾಗಿ ನಾಯಕರೊಬ್ಬರು ಭರವಸೆ ನೀಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಮೇಟಿ ಅವರಿಗೆ ಟಿಕೆಟ್ ನೀಡುವ ಮೂಲಕ ಪಕ್ಷ ಕಳಂಕಿತರಿಗೆ ಮಣೆ ಹಾಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲಾ ಬೆಳವಣಿಗೆಗಳೂ ತೀವ್ರಗೊಳ್ಳೂತ್ತಿದ್ದಂತೆ ಇತ್ತ ರಾಜಧಾನಿ ಬೆಂಗಳೂರು ಬಿಟ್ಟು ಸ್ವಕ್ಷೇತ್ರಗಳತ್ತ ಅಗ್ರ ಗಣ್ಯ ನಾಯಕರು ಕಾಲ್ಕಿತ್ತರು.
ಸಿದ್ದರಾಮಯ್ಯ ಅವರು ಬೆಳ್ಳಂಬೆಳಗ್ಗೆ ಮೈಸೂರಿಗೆ ತೆರಳಿದರು. ಇಂದಿನಿಂದ ಐದು ದಿನಗಳ ಕಾಲ ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕೂಡ ಸದಾಶಿವನಗರ ಮನೆಯಿಂದ ಬಿಸಿಲೇರುವ ಮೊದಲೇ ಕೊರಟಗೆರೆ ಕ್ಷೇತ್ರದತ್ತ ದೌಡಾಯಿಸಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿನ್ನೆಯಿಂದ ಕನಕಪುರ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದು, ಇಂದು ಬೆಳಗ್ಗೆ ಬಿಜೆಪಿಯ ಮೊಳಕಾಲ್ಮೂರು ಕ್ಷೇತ್ರದ ತಿಪ್ಪೇಸ್ವಾಮಿ ಅವರನ್ನು ಭೇಟಿ ಮಾಡಿ ನಂತರ ಕ್ಷೇತ್ರದತ್ತ ಪ್ರಯಾಣ ಬೆಳೆಸಿದರು.
ಟಿಕೆಟ್ ವಂಚಿತರ ಪ್ರತಿಭಟನೆ ಎದುರಿಸುವ ಮುಜುಗರದಿಂದ ತಪ್ಪಿಸಿಕೊಳ್ಳಲು ಪ್ರಮುಖ ನಾಯಕರು ತಮ್ಮ ಕ್ಷೇತ್ರಗಳತ್ತ ದೌಡಾಯಿಸಿದ್ದಾರೆ ಎಂದು ಹೇಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ