ಎಸ್.ಎಂ.ಕೃಷ್ಣ ಅವರ ಪುತ್ರಿಗೆ ಬಿಜೆಪಿ ಟಿಕೆಟ್ ಸಾಧ್ಯತೆ

ಬೆಂಗಳೂರು,ಏ.15- ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಿಲ್ಲ ಎಂದು ಮುನಿಸಿಕೊಂಡಿರುವ ಹಿರಿಯ ಮುತ್ಸದ್ದಿ, ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಅವರ ಪುತ್ರಿಗೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುವ ಸಂಭವವಿದೆ.
ಪಕ್ಷದ ಚಟುವಟಿಕೆಗಳಿಂದ ದೂರವಾಗಿರುವ ಕೃಷ್ಣ ಅವರನ್ನು ಓಲೈಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಅವರ ಪುತ್ರಿ ಶಾಂಭವಿಗೆ ಬೆಂಗಳೂರು ನಗರದ ಯಾವುದಾದರೊಂದು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲು ಮುಂದಾಗಿದ್ದಾರೆ.

ಮೂಲಗಳ ಪ್ರಕಾರ ಶಾಂತಿನಗರ ಇಲ್ಲವೇ ಯಶವಂತಪುರದಿಂದ ಶಾಂಭವಿ ಕೃಷ್ಣ ಅವರನ್ನು ಕಣಕ್ಕಿಳಿಸಲು ಬಿಜೆಪಿ ಲೆಕ್ಕಾಚಾರ ಹಾಕಿದೆ. ಎರಡು ದಿನಗಳ ಹಿಂದೆ ಸದಾಶಿವನಗರದಲ್ಲಿರುವ ಕೃಷ್ಣ ಅವರನ್ನು ಭೇಟಿ ಮಾಡಿದ ಬಿಜೆಪಿ ನಾಯಕರಾದ ಅನಂತ್‍ಕುಮಾರ್, ಪ್ರಕಾಶ್ ಜಾವ್ಡೇಕರ್ ಅವರು ತಮ್ಮ ಪುತ್ರಿಯನ್ನು ಕಣಕ್ಕಿಳಿಸುವಂತೆ ಕೃಷ್ಣ ಅವರಿಗೆ ಮನವಿ ಮಾಡಿದ್ದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೃಷ್ಣ ಅವರು ಕುಟುಂಬದವರ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಇದೀಗ ತಮ್ಮ ಪುತ್ರಿಯನ್ನು ಬೆಂಗಳೂರಿನ ಯಶವಂತಪುರ ಇಲ್ಲವೇ ಶಾಂತಿನಗರ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಕೃಷ್ಣ ಅವರು ಲೆಕ್ಕಾಚಾರ ಹಾಕಿದ್ದಾರೆ.
ಯಶವಂತಪುರದಲ್ಲಿ ಒಕ್ಕಲಿಗರ ಮತಗಳು ಹೆಚ್ಚಾಗಿರುವ ಕಾರಣ ಅಲ್ಲಿಂದ ಕಣಕ್ಕಿಳಿಸಬೇಕೆ, ಇಲ್ಲವೇ ಸುಶಿಕ್ಷಿತರು ಹಾಗೂ ಮಧ್ಯಮವರ್ಗದವರು ಹೆಚ್ಚಿರುವ ಶಾಂತಿನಗರದಿಂದ ಕಣಕ್ಕಿಳಿಸಬೇಕೇ ಎಂಬ ಬಗ್ಗೆ ಆಪ್ತರ ಜತೆ ಚರ್ಚಿಸಿದ್ದಾಗಿ ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ಇಂದಿಗೂ ಸುಶಿಕ್ಷಿತರು ಮತ್ತು ಮಧ್ಯಮವರ್ಗದವರು ಕೃಷ್ಣ ಅವರ ಬಗ್ಗೆ ಸಾಕಷ್ಟು ಸದಾಭಿಪ್ರಾಯ ಹೊಂದಿದ್ದಾರೆ. ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಾಡಿರುವ (ವಿಶೇಷವಾಗಿ ಐಟಿ ಕ್ಷೇತ್ರದಲ್ಲಿ )ಕೆಲಸಗಳು ಅವರ ಹೆಸರನ್ನು ಬಹು ಎತ್ತರಕ್ಕೆ ಕೊಂಡೊಯ್ದಿತ್ತು.
ಇದೀಗ ಬಿಜೆಪಿ ನಾಯಕರು ಕೃಷ್ಣ ಅವರನ್ನು ಬೆಂಗಳೂರು ಮಹಾನಗರ, ಮಂಡ್ಯ, ಮೈಸೂರು ಸೇರಿದಂತೆ ಮತ್ತಿತರ ಕಡೆ ಹೆಚ್ಚಿನ ಪ್ರಮಾಣದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವಂತೆ ಕೋರಿದ್ದಾರೆ.

ಬಿಜೆಪಿ ನಾಯಕರ ಬಹುತೇಕ ಮನವಿಗೆ ಸ್ಪಂದಿಸಿರುವ ಕೃಷ್ಣ, ನಾನು ಪಕ್ಷದ ಪರ ಪ್ರಚಾರ ನಡೆಸುತ್ತೇನೆ. ಪುತ್ರಿಯನ್ನು ಕಣಕ್ಕಿಳಿಸುವ ಬಗ್ಗೆ ಒಂದೆರಡು ದಿನಗಳಲ್ಲಿ ತೀರ್ಮಾನ ಪ್ರಕಟಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ