ಕಾಂಗ್ರೆಸ್ ನಾಯಕರು ಸೋಲಿನ ಭೀತಿಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಾ, ಕೆಟ್ಟ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ:ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ

ಬೆಂಗಳೂರು, ಏ.15-ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರು ಸೋಲಿನ ಭೀತಿಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಾ, ತಮ್ಮ ಕೆಟ್ಟ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಲಿನ ಭೀತಿಯಿಂದ ವರುಣಾ, ಚಾಮುಂಡೇಶ್ವರಿ ಎನ್ನುತ್ತಿದ್ದವರು ಈಗ ಬಾದಾಮಿ ಕಡೆ ಮುಖ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಹತಾಶರಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದ ವೇಳೆ ರಾಜ್ಯದಲ್ಲಿ ನಮ್ಮ ಕಾರ್ಯಕರ್ತರ ಕೊಲೆಯಾಗಿದೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ದೇಶದಲ್ಲೇ ಕೆಟ್ಟ ಸರ್ಕಾರ ಎಂಬ ಹಣೆಪಟ್ಟಿ ಹೊತ್ತಿದೆ ಎಂದು ಹರಿಹಾಯ್ದರು.
ದಿನೇಶ್‍ಗುಂಡೂರಾವ್ ಹೇಳಿಕೆ ಅವರ ಮಾನಸಿಕ ಸ್ಥಿತಿಯನ್ನು ತೋರಿಸಿದೆ. ಮಂತ್ರಿಗಿರಿ ಕಳೆದುಕೊಂಡ ನಂತರ ಈ ರೀತಿಯಾಗಿದ್ದಾರೆ ಎಂದು ಟೀಕಿಸಿದರು.

ಈ ಹಿಂದೆ ಮಣಿಶಂಕರ್ ಅಯ್ಯರ್ ಅವರು ಗುಜರಾತ್ ಚುನಾವಣೆ ವೇಳೆ ಪ್ರಧಾನಿ ಬಗ್ಗೆ ಹೇಳಿಕೆ ನೀಡಿದ್ದರು. ಆಗ ರಾಹುಲ್‍ಗಾಂಧಿ ಅಯ್ಯರ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದರು. ಅದೇರೀತಿ ದಿನೇಶ್‍ಗುಂಡೂರಾವ್ ಅವರನ್ನು ಅಮಾನತು ಮಾಡಬೇಕು. ಇಲ್ಲದಿದ್ದರೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಹ್ಯಾರಿಸ್ ಪುತ್ರನ ಹಲ್ಲೆ, ಭೆರತಿ ಬಸವರಾಜ್ ಶಿಷ್ಯನಿಂದ ಬಿಬಿಎಂಪಿ ಕಚೇರಿಗೆ ಬೆಂಕಿ ಹಚ್ಚುವುದನ್ನು ನೋಡಿದ್ದೇವೆ. ಕಾಂಗ್ರೆಸ್ ಸಮಾವೇಶಕ್ಕೆ ಜಾಗ ನೀಡಲಿಲ್ಲವೆಂದು ಸೋಮಶೇಖರ್ ಹಲ್ಲೆ ನಡೆಸಿದ್ದರು. ಅದೇ ರೀತಿ ಈಗ ಹತಾಶರಾಗಿ ಇನ್ನೂ ಕೆಲವರು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕುಟುಕಿದರು.
ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ. ಗೋರಖ್‍ಪುರ ಮತ್ತು ಕರ್ನಾಟಕದ ನಡುವೆ ಅವಿನಾಭಾವ ಸಂಬಂಧವಿದೆ. ಇಷ್ಟೆಲ್ಲ ಗೊತ್ತಿದ್ದು, ದಿನೇಶ್‍ಗುಂಡೂರಾವ್ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಅಂತಹ ಹೇಳಿಕೆ ನೀಡಿರುವುದು ನಾಥ ಪಂಥದ ಅನುಯಾಯಿಗಳಿಗೆ ನೋವುಂಟು ಮಾಡಿದೆ ಎಂದರು.

ತಿಪ್ಪೇಸ್ವಾಮಿ ಬೆಂಬಲಿಗರಿಂದ ಶ್ರೀರಾಮುಲು ಮೇಲೆ ಹಲ್ಲೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಈ ಬಗ್ಗೆ ಪಕ್ಷ ಗಂಭೀರವಾಗಿ ಪರಿಶೀಲನೆ ನಡೆಸುತ್ತದೆ. ತಿಪ್ಪೇಸ್ವಾಮಿ ಮಾತನಾಡಿರುವ ವಿಡಿಯೋ ವರದಿಯನ್ನು ತರಿಸಿಕೊಂಡು ಅದರ ಪರಿಶೀಲನೆ ನಂತರ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ