ಚುನಾವಣಾ ಆಯೋಗ ಚಾಪೆ ಕೆಳಗೆ ನುಸುಳಿದರೆ ಅಭ್ಯರ್ಥಿಗಳು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಆಯೋಗದ ಹದ್ದಿನ ಕಣ್ಣು ತಪ್ಪಿಸಿ ಮತದಾರರ ಮನವೊಲಿಸಲು ವಿವಿಧ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಚುನಾವಣಾ ಪ್ರಚಾರದ ನೆಪದಲ್ಲಿ ವಿವಿಧ ಉಡುಗೊರೆಗಳನ್ನು ಮತದಾರರಿಗೆ ತಲುಪಿಸುತ್ತಿದ್ದಾರೆ

ಬೆಂಗಳೂರು, ಏ.15-ಚುನಾವಣಾ ಆಯೋಗ ಚಾಪೆ ಕೆಳಗೆ ನುಸುಳಿದರೆ ಅಭ್ಯರ್ಥಿಗಳು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಆಯೋಗದ ಹದ್ದಿನ ಕಣ್ಣು ತಪ್ಪಿಸಿ ಮತದಾರರ ಮನವೊಲಿಸಲು ವಿವಿಧ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಚುನಾವಣಾ ಪ್ರಚಾರದ ನೆಪದಲ್ಲಿ ವಿವಿಧ ಉಡುಗೊರೆಗಳನ್ನು ಮತದಾರರಿಗೆ ತಲುಪಿಸುತ್ತಿದ್ದಾರೆ.

ಸೀರೆ, ಮೂಗುತಿ, ಹಣ, ವಾಚ್, ಗೋಡೆ ಗಡಿಯಾರ, ಕುಕ್ಕರ್, ಮಿಕ್ಸಿ ಮುಂತಾದ ವಸ್ತುಗಳು ಮತದಾರರನ್ನು ತಲುಪುತ್ತಿವೆ. ಆಯೋಗದ ಕಣ್ತಪ್ಪಿಸಿ ಅಭ್ಯರ್ಥಿಗಳ ಪರ ಅವರ ಬೆಂಬಲಿಗರು ಮತದಾರರ ಮನವೊಲಿಸುವ ಯತ್ನವನ್ನು ನಿರಂತರವಾಗಿ ಮಾಡುತ್ತಲೇ ಇದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸಾವಿರಾರು ಗೋಡೆ ಗಡಿಯಾರಗಳನ್ನು ಹಂಚಲಾಗಿದೆ. ಬನ್ನೇರುಘಟ್ಟ ಚಿಕ್ಕಮ್ಮನಹಳ್ಳಿ ಮೀನಾಕ್ಷಿ ದೇವಸ್ಥಾನ ಮುಂತಾದ ಕಡೆ ಪ್ರಮುಖ ಪಕ್ಷವೊಂದರ ಅಭ್ಯರ್ಥಿಯ ಭಾವಚಿತ್ರವಿರುವ ಸಾವಿರಾರು ಗೋಡೆ ಗಡಿಯಾರವನ್ನು ಮತದಾರರಿಗೆ ವಿತರಿಸಲಾಗಿದೆ.

ಇದೇ ರೀತಿ ಹಲವೆಡೆ ಸೀರೆ, ಗೃಹೋಪಯೋಗಿ ವಸ್ತುಗಳನ್ನು ಮತದಾರರಿಗೆ ತಲುಪಿಸಿ ಮತ ಕೇಳುವ ಪ್ರಯತ್ನ ಮಾಡಲಾಗುತ್ತಿದೆ.
ಹಾಲಿನ ಡೈರಿ ಸ್ತ್ರೀ ಶಕ್ತಿ ಸಂಘಗಳು, ಗ್ರಾಮಗಳಲ್ಲಿರುವ ವಿವಿಧ ಸಂಘಸಂಸ್ಥೆಗಳ ಮೂಲಕ ರಾಜಕೀಯ ಮುಖಂಡರು ವಿವಿಧ ಆಮಿಷಗಳನ್ನೊಡ್ಡಿ ಮತ ಯಾಚನೆ ಮಾಡುತ್ತಿದ್ದಾರೆ. ಇದಲ್ಲದೆ, ದೇವಾಲಯಗಳಲ್ಲಿ ಸಭೆಗಳನ್ನು ಮಾಡಿ ಸಮುದಾಯ ಭವನಗಳ ನಿರ್ಮಾಣ, ದೇವಾಲಯಗಳ ಅಭಿವೃದ್ಧಿಗೆ ಹಣ ನೆರವು ಮುಂತಾದವುಗಳ ಮೂಲಕ ಆಯಾ ಜಾತಿ, ಜನಾಂಗಗಳ ಮತ ಪಡೆಯುವ ಪ್ರಯತ್ನದಲ್ಲೂ ಕೆಲವರು ತೊಡಗಿದ್ದಾರೆ.

ಒಟ್ಟಾರೆ ಆಯೋಗ ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಅಭ್ಯರ್ಥಿಗಳು ವಿವಿಧ ಆಮಿಷಗಳ ಮೂಲಕ ಮತದಾರರನ್ನು ಸೆಳೆಯುವ ತಮ್ಮ ಪ್ರಯತ್ನವನ್ನು ನಿರಂತರವಾಗಿ ಮುಂದುವರೆಸಿಯೇ ಇದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ