33 ಪ್ರಕರಣಗಳಿಗೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧಿಸಿ 70.42 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣ ವಶ


ಬೆಂಗಳೂರು, ಏ.14- ಜೀವನ್‍ಭಿಮಾ ನಗರ ಠಾಣೆ ಪೊಲೀಸರು 33 ಪ್ರಕರಣಗಳಿಗೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧಿಸಿ 70.42 ಲಕ್ಷ ರೂ. ಮೌಲ್ಯದ 2120 ಗ್ರಾಂ ಚಿನ್ನದ ಆಭರಣಗಳು, ದ್ವಿಚಕ್ರ ವಾಹನಗಳು, ಕಾರು ಹಾಗೂ ಮೊಬೈಲ್‍ಗಳನ್ನು ಪಡಿಸಿಕೊಂಡಿದ್ದಾರೆ.

ಮನೆಗಳ್ಳತನ ಮಾಡುತ್ತಿದ್ದ ಶಿವರಾಸನ್ (29) ಎಂಬಾತನನ್ನು ಬಂಧಿಸಿ 28.89 ಲಕ್ಷ ರೂ. ಬೆಲೆಯ 963 ಗ್ರಾಂ ಚಿನ್ನದ ಒಡವೆಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್ ಮತ್ತು ಆಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹೊಂಗಸಂದ್ರದ ಬೇಗೂರು ಮುಖ್ಯರಸ್ತೆ, ಪಾರಿಜಾತ ಅಪಾರ್ಟ್‍ಮೆಂಟ್ ಬಳಿ ಆರೋಪಿ ಶಿವರಾಸನ್‍ನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ.

ಈತನ ಬಂಧನದಿಂದ ಜೆಬಿ ನಗರ ಠಾಣೆಯ 7 ಪ್ರಕರಣ, ಬಯ್ಯಪ್ಪನಹಳ್ಳಿ 3, ಹಲಸೂರು 4, ಇಂದಿರಾನಗರ, ಕೆಆರ್ ಪುರಂ, ಕೆಜಿ ಹಳ್ಳಿಯ ತಲಾ ಒಂದೊಂದು ಪ್ರಕರಣ, ರಾಮಮೂರ್ತಿನಗರ 3 ಪ್ರಕರಣಗಳು ಸೇರಿ ಒಟ್ಟು 19 ಪ್ರಕರಣಗಳನ್ನು ಪತ್ತೆಹಚ್ಚಿದಂತಾಗಿದೆ.

ಮನೆಗಳ್ಳಿಯ ಸೆರೆ: ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಮೂರು ತಿಂಗಳಿನಿಂದ ಕಳ್ಳತನ ಮಾಡುತ್ತಿದ್ದ ಭಾಗ್ಯಲಕ್ಷ್ಮಿ (34) ಎಂಬಾಕೆಯನ್ನು ಬಂಧಿಸಿರುವ ಜೆಬಿ ನಗರ ಠಾಣೆ ಪೊಲೀಸರು 5 ಲಕ್ಷ ರೂ. ಬೆಲೆಬಾಳುವ 173 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕನ್ನಗಳವು- ಇಬ್ಬರ ಸೆರೆ: ಕನ್ನಗಳವು ನಡೆಸುತ್ತಿದ್ದ ಆರೋಪಿಗಳಾದ ನಾಗೇಶ್ (32) ಮತ್ತು ಮಂಜುಶ್ರೀ (43) ಎಂಬುವವರನ್ನು ಬಂಧಿಸಿ ಕನ್ನಗಳವು ಹಾಗೂ ಸಾಮಾನ್ಯ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿ 16.18 ಲಕ್ಷ ರೂ. ಬೆಲೆಬಾಳುವ 578 ಗ್ರಾಂ ತೂಕದ ಚಿನ್ನದ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

ಇವರಿಬ್ಬರ ಬಂಧನದಿಂದ ಜೆಬಿ ನಗರ ಠಾಣೆಯ 8 ಪ್ರಕರಣ, ಬಯ್ಯಪ್ಪನಹಳ್ಳಿ ಠಾಣೆಯ 3, ಇಂದಿರಾನಗರ ಠಾಣೆಯ 1 ಪ್ರಕರಣ ಸೇರಿ ಒಟ್ಟು 12 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.

ಕೆಲಸಕ್ಕಿದ್ದ ಅಂಗಡಿಯಲ್ಲೇ ಕಳವು: ತಾನು ಕೆಲಸ ಮಾಡುತ್ತಿದ್ದ ಚಿನ್ನದ ಅಂಗಡಿಯಿಂದ ಆಭರಣಗಳನ್ನು ಕಳ್ಳತನ ಮಾಡುತ್ತಿದ್ದ ಸಚಿನ್ (27) , ಮತ್ತು ಓಂಕಾರ ಅಪಾರ್ಟ್‍ಮೆಂಟ್ ವಾಸಿ ಗಾಂವ್‍ನವಿ ಮುಂಬೈ ಎಂಬುವರನ್ನು ಬಂಧಿಸಿ ಕದ್ದಿದ್ದ ಒಡವೆಗಳ ಪೈಕಿ 400 ಗ್ರಾಂ ತೂಕದ ಚಿನ್ನಾಭರಣಗಳನ್ನು ಜೆಬಿ ನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಒಂದು ಲಕ್ಷ ಬಹುಮಾನ: ಪೂರ್ವ ವಿಭಾಗದ ಪೆÇಲೀಸರು ನಡೆಸಿರುವ ಯಶಸ್ವಿ ಕಾರ್ಯಾಚರಣೆಯನ್ನು ನಗರ ಪೆÇಲೀಸ್ ಆಯುಕ್ತರು ಶ್ಲಾಘಿಸಿ ತನಿಖಾ ತಂಡಕ್ಕೆ ಒಂದು ಲಕ್ಷ ಬಹುಮಾನ ಘೋಷಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ