ಕಾಂಗ್ರೆಸ್ ಪಕ್ಷದ ಹುರಿಯಾಳುಗಳ ಪಟ್ಟಿ ಬಿಡುಗಡೆಗೆ ಅಂತಿಮ ಹಂತದ ಕಸರತ್ತು

 

ನವದೆಹಲಿ, ಏ.13-ವಿಧಾನಸಭೆ ಚುನಾವಣೆಗೆ ಇಂದು ಅಥವಾ ನಾಳೆ ಕಾಂಗ್ರೆಸ್ ಪಕ್ಷದ ಹುರಿಯಾಳುಗಳ ಪಟ್ಟಿ ಬಿಡುಗಡೆಯಾಗಲಿದೆ. ನವದೆಹಲಿಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ಹಂತದ ಕಸರತ್ತು ನಡೆಯುತ್ತಿದೆ.

ನವದೆಹಲಿಯಲ್ಲಿಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಧಾನಕಾರ್ಯದರ್ಶಿ, ಕೇಂದ್ರ ಚುನಾವಣಾ ಪರಿಶೀಲನಾ ಸಮಿತಿ ಅಧ್ಯಕ್ಷರೂ ಆದ ಮಧುಸೂದನ್ ಮಿಸ್ತ್ರೀ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಮುಂತಾದ ನಾಯಕರು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸಿದರು.

ಈಗಾಗಲೇ ಸ್ಕ್ರೀನಿಂಗ್ ಕಮಿಟಿ ನೀಡಿರುವ ಅಭ್ಯರ್ಥಿಗಳ ಪಟ್ಟಿ ಕುರಿತು ಅಂತಿಮ ಹಂತದ ಚರ್ಚೆ ನಡೆಸಲಾಯಿತು. ಮೊದಲ ಹಂತದಲ್ಲಿ 140 ಅಭ್ಯರ್ಥಿಗಳ ಪಟ್ಟಿ, ಎರಡನೇ ಹಂತದಲ್ಲಿ 84 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ.

ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶತಾಯಗತಾಯ ಪ್ರಯತ್ನ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮೂಲಕ 2019ರ ಚುನಾವಣೆಗೆ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನಗೊಳಿಸಬೇಕು ಎಂಬ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಿರುವ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ಅಳೆದು ತೂಗಿ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದಾರೆ.

ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆ, ಜಾತಿವಾರು ಆದ್ಯತೆ, ಪಕ್ಷ ನಿಷ್ಠೆ, ಹೊರಗಿನಿಂದ ಬಂದವರಿಗೆ ಮಣೆ ಹಾಕುವುದು ಸೇರಿದಂತೆ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಮೊದಲ ಹಂತದ 150 ಅಭ್ಯರ್ಥಿಗಳ ಆಯ್ಕೆ ಅಂದರೆ ಏ.10 ರಂದೇ ಅಂತಿಮಗೊಂಡಿದ್ದು, ಪ್ರಕಟವಾಗುವುದು ಬಾಕಿ ಇದೆ. ಅದರೊಂದಿಗೆ ಉಳಿದ 74 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಗಂಭೀರ ಚರ್ಚೆ ನಡೆಸಿ ಕ್ರಮಕೈಗೊಳ್ಳಲಾಗಿದೆ.
ಹಾಲಿ ಶಾಸಕರ ಕ್ಷೇತ್ರಗಳ ಹೊರತುಪಡಿಸಿ ವಿವಿಧ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಹೆಚ್ಚಾಗಿರುವುದರಿಂದ ಆ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ಪಟ್ಟಿ ಬಿಡುಗಡೆ ಮಾಡಿದರೆ ಹಲವು ಕ್ಷೇತ್ರಗಳಲ್ಲಿ ಬಂಡಾಯ ಏಳುವ ಸಾಧ್ಯತೆ ಇರುವುದರಿಂದ ಕೊನೆ ಕ್ಷಣದಲ್ಲಿ ಅಭ್ಯರ್ಥಿಗಳ ಆಯ್ಕೆ ಘೋಷಿಸುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ