ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ ಪ್ರಣಾಳಿಕೆ ಬಿಡುಗಡೆ

ಬೆಂಗಳೂರು, ಏ.11-ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ (ಎಂಇಪಿ)ಚುನಾವಣೆ ಹಿನ್ನೆಲೆಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅಭಿವೃದ್ಧಿ ಯೋಜನೆಗಳ ಸಮಾನ ಅನುಷ್ಠಾನಗೊಳಿಸುವ ಮೂಲಕ ಸರ್ವ ಜನರ ಏಳಿಗೆಗೆ ಶ್ರಮಿಸಲು ಪಕ್ಷ ಮುಂದಾಗಿದೆ. ಈ ನಿಟ್ಟಿನಲ್ಲಿ ಕುಟುಂಬವೊಂದಕ್ಕೆ 1 ರೂ. ನಂತೆ ಪ್ರತಿ ತಿಂಗಳು 35 ಕೆಜಿ ಅಕ್ಕಿ ಪೂರೈಕೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆಹಾರ ಸರಬರಾಜಿಗಾಗಿ ಕ್ಯಾಂಟೀನ್ ಸ್ಥಾಪನೆ, ವಿದ್ಯುತ್ ಸ್ಥಗಿತವಿಲ್ಲದ ಕರ್ನಾಟಕ ನಿರ್ಮಾಣ, ನೀರಾವರಿ ಯೋಜನೆಗಳ ಪರಿಷ್ಕರಣೆಗೆ ಕ್ರಮ, ಸಮಾಜದ ಕೆಳವರ್ಗದ ಜನರಿಗೆ ಗುಣಮಟ್ಟದ ಶಿಕ್ಷಣ ಸೌಲಭ್ಯ, ಅಲ್ಪಸಂಖ್ಯಾತರ ಬದುಕು ಹಸನಾಗಿಸಲು ವಿಶೇಷ ಸುಧಾರಣಾ ಕ್ರಮದಂತಹ ಹಲವಾರು ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ಹೇಳಿದೆ.

ಎಲ್ಲಾ ರೈತರಿಗೂ ಸರ್ಕಾರಿ ಇಲಾಖೆಗಳ ಮೂಲಕ ಉಚಿತ ಬಿತ್ತನೆ ಬೀಜ, ಮಣ್ಣು ಪರೀಕ್ಷಾ ಕೇಂದ್ರಗಳಲ್ಲಿ ಉಚಿತ ಪರೀಕ್ಷೆಗೆ ಅವಕಾಶ, ಸಂಚಾರಿ ವೈದ್ಯಕೀಯ ಸೇವೆ ಹಾಗೂ ಟೆಲಿ ಮೆಡಿಷನ್ ಸೇವೆಯನ್ನು ತಾಲೂಕು ಕೇಂದ್ರಗಳ ಮೂಲಕ ಗ್ರಾಮೀಣ ಪ್ರದೇಶಗಳಿಗೂ ಒದಗಿಸುವುದು, ಹೆರಿಗೆ ನಂತರವೂ ಮಹಿಳೆಯರಿಗೆ ಆರು ತಿಂಗಳ ಆರ್ಥಿಕ ನೆರವು, ಪ್ರತಿ ಜಿಲ್ಲೆಯಲ್ಲಿ ಸೂಪರ್‍ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆಗಳ ಸ್ಥಾಪನೆ, ಮಾದರಿ ರಾಜ್ಯವನ್ನಾಗಿಸಲು ಬಂಡವಾಳ ಹೂಡಿಕೆಗೆ ಉತ್ತಮ ಅವಕಾಶ ಕಲ್ಪಿಸುವುದು, ರಾಜ್ಯಾದ್ಯಂತ ಗುಣಮಟ್ಟ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳನ್ನು ಅಣಿಗೊಳಿಸುವುದು, ಬೆಂಗಳೂರನ್ನು ಹಸಿರು ಉದ್ಯಾನನಗರಿಯನ್ನಾಗಿ ಮಾಡಿ ತ್ಯಾಜ್ಯ ಮುಕ್ತಗೊಳಿಸುವುದೂ ಸೇರಿದಂತೆ ಮಹಿಳೆಯರ ಸುರಕ್ಷತೆ ಇನ್ನಿತರ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಪ್ರಣಾಳಿಕೆಯಲ್ಲಿ ತಿಳಿಸಿದೆ.

ಮಹಿಳೆಯರ ಶೀಘ್ರ ನ್ಯಾಯದಾನ ವ್ಯವಸ್ಥೆಗಾಗಿ ತ್ವರಿತ ಸಂಜೆ ಕೋರ್ಟ್‍ಗಳ ಸ್ಥಾಪನೆಯಂತಹ ವಿಶೇಷ ಯೋಜನೆಗಳನ್ನೊಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಿರುವ ಎಂಇಪಿ ಉಜ್ವಲ ಕರ್ನಾಟಕಕ್ಕಾಗಿ, ನಿಜವಾದ ಸಬಲೀಕರಣಕ್ಕಾಗಿ ಎಂಇಪಿ ಜೊತೆ ಕೈ ಜೋಡಿಸಿ ಎಂದು ಘೋಷಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ