ಉತ್ತರ ಪ್ರದೇಶದಂತೆ ಕರ್ನಾಟಕದಲ್ಲೂ ಅಚ್ಚರಿ ಫಲಿತಾಂಶ ಬರಲಿದೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ

ಬೆಂಗಳೂರು,ಏ.6-ಉತ್ತರ ಪ್ರದೇಶದಂತೆ ಕರ್ನಾಟಕದಲ್ಲೂ ಅಚ್ಚರಿ ಫಲಿತಾಂಶ ಬರಲಿದ್ದು , ಬಿಜೆಪಿ ಅಧಿಕಾರ ಹಿಡಿಯುವುದರಲ್ಲಿ ಯಾವ ಸಂದೇಹವೂ ಬೇಡ ಎಂದೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಅನಿರೀಕ್ಷಿತ ಫಲಿತಾಂಶಕ್ಕೆ ರಾಜ್ಯದ ಜನತೆ ಕಾತುರರಾಗಿದ್ದಾರೆ. ನಾವು ವಿಷನ್ 150 ಗುರಿಯನ್ನು ತಲುಪುವುದರಲ್ಲಿ ಯಾವ ಅನುಮಾನವೂ ಬೇಡ. ಅದಕ್ಕೆ ಬೇಕಾದ ಕಾರ್ಯ ತಂತ್ರವನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬೇರೆ ಬೇರೆ ರೀತಿಯ ಒಟ್ಟು 16 ಸಮೀಕ್ಷೆಗಳನ್ನು ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಪಪಡಿಸಲಾಗುತ್ತಿದೆ. ಎರಡು ದಿನಗಳಿಂದ 140ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಇದು ಪೂರ್ಣಗೊಂಡ ನಂತರ ಕೇಂದ್ರ ಮಂಡಳಿಗೆ ಕಳುಹಿಸಿ ಅಭ್ಯರ್ಥಿಗಳ ಆಯ್ಕೆ ಮಾಡಲಿದ್ದು, ನಂತರ ಪಟ್ಟಿ ಪ್ರಕಟವಾಗಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಏನನ್ನು ಹೇಳಲಾರೆ ಕೆಲವೇ ದಿನಗಳಲ್ಲಿ ಅಧಿಕಾರ ಕಳೆದುಕೊಂಡು ಮನೆಗೆ ಹೋಗುವವರ ಬಗ್ಗೆ ಪ್ರತಿಕ್ರಿಯೆ ಕೊಡುವುದು ಸರಿಯಲ್ಲ. ತಮ್ಮ ಸ್ವಂತ ಕ್ಷೇತ್ರಗಳಾದ ಚಾಮುಂಡೇಶ್ವರಿ, ವರುಣಾ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರ ಹುಡುಕುವ ದಯನೀಯ ಪರಿಸ್ಥಿತಿ ಅವರಿಗೆ ಬಂದಿದೆ ಎಂದು ವ್ಯಂಗ್ಯವಾಡಿದರು.

ನಮ್ಮಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಿರುವುದರಿಂದ ಸಣ್ಣಪುಟ್ಟ ಗೊಂದಲ ಇರಬಹುದು. ಆದರೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿ ಆಗ ಅವರ ಒಳಜಗಳ ಬೀದಿಗೆ ಬರುತ್ತದೆ ಎಂದು ಟೀಕಿಸಿದರು.

ನಾವು ನಮ್ಮ ಪಕ್ಷದ ಹಿಂದಿನ ದಿನಗಳನ್ನು ನೆನೆಸಿಕೊಳ್ಳಬೇಕು. ಮುಂಬೈ ಅಧಿವೇಶನದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಂದೇರ ಚಲೇ ಗಾ, ಸೂರಜ್ ನಿಕಲೇಗ, ಕಮಲ್ ಕಿಲೇಗಾ ಎಂದು ಹೇಳಿರುವುದನ್ನು ಸ್ಮರಿಸಿದರು.
ನಾನು ವಾಜಪೇಯಿ ಮತ್ತು ಅಡ್ವಾಣಿಯವರೊಂದಿಗೆ ರಾಜ್ಯ ಪ್ರವಾಸ ಮಾಡುತ್ತಿದ್ದ ದಿನಗಳು ನೆನಪಿದೆ ಎಂದ ಅವರು, ಇಂದು 22ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 16 ಬಿಜೆಪಿ ಮುಖ್ಯಮಂತ್ರಿಗಳಿದ್ದಾರೆ. ಇನ್ನು ಒಂದು ವಾರದಲ್ಲಿ ನಿಮ್ಮಗೆಲ್ಲ ಒಂದು ಶುಭ ಸುದ್ದಿ ಸಿಗಬಹುದು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಉನ್ನತ ಸ್ಥಾನದಲ್ಲಿ ಕೂರಿಸುವ ಪ್ರಯತ್ನ ನಡೆದಿದೆ ಎಂದು ಸೂಚ್ಯವಾಗಿ ಹೇಳಿದರು.
ಮಾಜಿ ಸಚಿವ ಸುರೇಶ್ ಕುಮಾರ್ ಮಾತನಾಡಿ, ನಾನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜನರ ಭಾಗವಾಗಿ ಕೆಲಸ ಮಾಡಿದ್ದೆ. ಏಪ್ರಿಲ್ 6 ನಮಗೆ ಸಂಭ್ರಮದ ದಿನ 38 ವರ್ಷಗಳ ಹಿಂದೆ ನಾವು ಮರುಹುಟ್ಟು ಪಡೆದುಕೊಂಡಿದ್ದೇನೆ ಎಂದರು.

ನಮಗೆ ಆರ್‍ಎಸ್‍ಎಸ್ ಎಂದರೆ ತಾಯಿ ಮತ್ತು ಮಗುವಿನ ಸಂಬಂಧವಿದ್ದ ಹಾಗೆ . ಪ್ರಪಂಚದಲ್ಲೇ ಅತಿದೊಡ್ಡ ಸಂಘಟನೆಯಾಗಿ ಹೊರಹೊಮ್ಮಿದೆ. ಸಂಘಟನೆಯಲ್ಲಿ ನಾನು ಗುರುತಿಸಿಕೊಂಡಿರುವುದಕ್ಕೆ ಹೆಮ್ಮೆ ಇದೆ ಎಂದರು.

1984ರಲ್ಲಿ ಬಿಜೆಪಿ ಕೇವಲ ಎರಡು ಸ್ಥಾನ ಗೆದ್ದಿತ್ತು.ಇಂದು ಕೇಂದ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಬಾರಿ ಬಹುಮತ ಪಡೆದು ಅಧಿಕಾರ ನಡೆಸುತ್ತಿದ್ದೇವೆ. ವಿಶ್ವದಲ್ಲೇ ಅತಿಹೆಚ್ಚು ಕಾರ್ಯಕರ್ತರನ್ನು ಹೊಂದಿದ ಪಕ್ಷ ಎಂಬ ಹೆಗ್ಗಳಿಕೆಗೂ ಬಿಜೆಪಿ ಪಾತ್ರವಾಗಿದೆ.
ನಮ್ಮ ಪಕ್ಷದ ನೇತಾರ ಯಡಿಯೂರಪ್ಪ ನೇತೃತ್ವದಲ್ಲಿ ಜನಪರ ಸಭೆ ನಡೆಸಬೇಕೆಂಬುದು ನಮ್ಮೆಲ್ಲರ ದೃಢ ಸಂಕಲ್ಪ ಎಂದು ವಾಗ್ದಾನ ಮಾಡಿದರು.
ಈ ವೇಳೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ, ಅರುಣ್‍ಕುಮಾರ್, ಮಂಜುಳಾ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ