ಕಾಗಿನೆಲೆಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಆಗಮಿಸದ ಜನ: ಈಶ್ವರಪ್ಪ ವಿರುದ್ದ ಅಮಿತ ಶಾ ಗರಂ

ಬೆಂಗಳೂರು,ಏ.4-ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ನಿರೀಕ್ಷೆಗೆ ತಕ್ಕಂತೆ ಜನ ಆಗಮಿಸದೆ ಹೋಗಿದ್ದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಹಾಗೂ ಪ್ರಭಾವಿ ಕುರುಬ ಜನಾಂಗದ ಮುಖಂಡ ಈಶ್ವರಪ್ಪ ವಿರುದ್ದ ಗರಂ ಆಗಿದ್ದಾರೆ.

ಕಾಗಿನೆಲೆ ಕನಕ ಪೀಠದ ಶ್ರೀ ನಿರಂಜನಂದಾಪುರಿ ಸ್ವಾಮೀಜಿ ಅವರನ್ನು ಭೇಟಿ ಮಾಡಲು ಅವಕಾಶ ಸಿಗದೆ ಹೋಗಿದ್ದಕ್ಕೆ ಅಮಿತ್ ಷಾ ತೀವ್ರ ಬೇಸರಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರನ್ನು ಅವರು ತರಾಟೆಗೆ ತೆಗೆದುಕೊಂಡರೆಂದು ತಿಳಿದುಬಂದಿದೆ.

ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಒಂದು ಲಕ್ಷ ಜನ ಸೇರುತ್ತಾರೆ ಎಂದು ನೀವೇ ಹೇಳಿದ್ದಿರಿ. ಕಾರ್ಯಕ್ರಮ ಯಶಸ್ವಿಗೆ ಪಕ್ಷವು ಎಲ್ಲ ನೆರವನ್ನು ನೀಡಿತ್ತು. ಆದರೂ ನಿರೀಕ್ಷಿಸಿದಷ್ಟು ಜನ ಆಗಮಿಸಲಿಲ್ಲ ಏಕೆ? ಇದಕ್ಕೆ ಕಾರಣವೇನು ಎಂದು ಷಾ ಪ್ರಶ್ನಿಸಿದ್ದಾರೆ.
ನೀವು ಹಿಂದುಳಿದ ವರ್ಗದ ಪ್ರಭಾವಿ ನಾಯಕರಾಗಿದ್ದುಕೊಂಡು ಇಂತಹ ಒಂದು ಕಾರ್ಯಕ್ರಮ ಯಶಸ್ವಿಗೊಳಿಸಲು ಆಗದಿದ್ದ ಮೇಲೆ ನೀವೆಂಥ ನಾಯಕರು ಎಂದು ಷಾ ಈಶ್ವರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆಂದು ಬಲ್ಲ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ