ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ – ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್

ಹುಬ್ಬಳ್ಳಿ, ಏ.3- ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಈಗಾಗಲೇ ರಾಜ್ಯದ ಹಲವು ಕಡೆ ಪ್ರವಾಸ ಮಾಡಿದ್ದೇವೆ. ನಮಗೆ ಈ ಬಗ್ಗೆ ಭರವಸೆ ಇದೆ. ರಾಜ್ಯದ ಜನ ನಮ್ಮ ಪರ ಇದ್ದಾರೆ. ರಾಜ್ಯಕ್ಕೆ ಅಮಿತ್ ಷಾ, ಮೋದಿ ಯಾರೇ ಬಂದರೂ ಇಲ್ಲಿ ವರ್ಕ್‍ಔಟ್ ಆಗುವುದಿಲ್ಲ. ಯಡಿಯೂರಪ್ಪನವರದು ಮೊದಲೇ ವರ್ಕ್‍ಔಟ್ ಆಗಲ್ಲ ಎಂದು ಹೇಳಿದರು.
ಈಗಾಗಲೇ ಹಲವು ಸುತ್ತಿನ ಪ್ರವಾಸಗಳನ್ನು ಮಾಡಿದ್ದೇವೆ. ಎಐಸಿಸಿ ಅಧ್ಯಕ್ಷ ರಾಹುಲ್ ನೇತೃತ್ವದಲ್ಲಿ ನಡೆದ ಜನಾಶೀರ್ವಾದ ಯಾತ್ರೆಗೆ ವ್ಯಾಪಕ ಬೆಂಬಲ ದೊರೆತಿದೆ. ನಮ್ಮ ಸರ್ಕಾರ ಐದು ವರ್ಷಗಳ ಕಾಲ ಮಾಡಿದ ಅಭಿವೃದ್ಧಿ ಕೆಲಸಗಳಿಗೆ ಜನಮನ್ನಣೆ ದೊರೆತಿದೆ. ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು.
ಜೆಡಿಎಸ್‍ನ ಎಚ್‍ಡಿಕೆ ಹಾಗೂ ದೇವೇಗೌಡರ ಯಾವ ತಂತ್ರವೂ ಕೂಡ ಈ ಚುನಾವಣೆಯಲ್ಲಿ ವರ್ಕ್‍ಔಟ್ ಆಗುವುದಿಲ್ಲ ಎಂದು ಪರಮೇಶ್ವರ್ ತಿಳಿಸಿದರು.
ಸಿಎಂ ಯಾರಾಗಬೇಕು ಎಂಬುದನ್ನು ನಾವು ನಂತರ ಚರ್ಚೆ ಮಾಡುತ್ತೇವೆ. ಟಿಕೆಟ್ ಬಗ್ಗೆ ಗೊಂದಲ ಪಡುವುದು ಬೇಡ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು.
ಅಶೋಕ್ ಖೇಣಿ ಟಿಕೆಟ್ ವಿಚಾರಕ್ಕೆ ಸಂಬಂಧಪಟ್ಟಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಂದೇ ಟಿಕೆಟ್ ಇನ್ನೂ ಕನ್‍ಫರ್ಮ್ ಆಗಿಲ್ಲ. ಬೇರೆಯವರ ಟಿಕೆಟ್ ನಾನು ಹೇಗೆ ಹೇಳಲಿ ಎಂದು ಮಾರ್ಮಿಕವಾಗಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಷೇತ್ರ ಬದಲಾವಣೆ ಮಾಡುವುದಿಲ್ಲ. ಅದು ಮಾಧ್ಯಮಗಳ ಊಹಾಪೆÇೀಹ ಅಷ್ಟೆ. ಇನ್ನೂ ಯಾರ ಟಿಕೆಟ್ ಘೋಷಣೆಯಾಗಿಲ್ಲ. ಹೀಗಾಗಿ ಈಗಲೇ ಅದರ ಬಗ್ಗೆ ಮಾತನಾಡುವುದು ಬೇಡ ಎಂದು ಪರಮೇಶ್ವರ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ