ಏ.2ರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮುಂಬೈ ಕರ್ನಾಟಕ ಪ್ರವಾಸ

ಬೆಂಗಳೂರು,ಏ.1-ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಾಳೆಯಿಂದ ಮುಂಬೈ ಕರ್ನಾಟಕದಲ್ಲಿ ತಮ್ಮ ಪ್ರವಾಸವನ್ನು ಆರಂಭಿಸಲಿದ್ದಾರೆ.
ನಾಳೆಯಿಂದ ಮೂರು ದಿನಗಳ ಕಾಲ ಬೆಳಗಾವಿ, ಬಾಗಲಕೋಟೆ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಪ್ರವಾಸ ನಡೆಸಲಿರುವ ಅಮಿತ್ ಷಾ ಪಕ್ಷವನ್ನು ಬೆಂಬಲಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಲಿದ್ದಾರೆ.

ಇಂದು ರಾತ್ರಿಯೇ ಬೆಳಗಾವಿ ತಲುಪಲಿರುವ ಅವರು ನಾಳೆ ಬೆಳಗ್ಗೆ 10.30ಕ್ಕೆ ಕಿತ್ತೂರಿನಲ್ಲಿರುವ ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಕಾರ್ಯಕರ್ತರುನ್ನದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಬಳಿಕ ಸ್ವತಂತ್ರ ಸೇನಾನಿ ನಂದಗಡದಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡುವರು. ನಂತರ ಬೆಳಗಾವಿಯ ಕೆಎಲ್‍ಇ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿರುವ ಅಮಿತ್ ಷಾ ಚಿಕ್ಕೋಡಿಯ ಡಿ.ಕೆ.ಕಾಲೇಜಿನಲ್ಲಿ ಸಮಾಜಚಿಂತನ ಸಭೆಯಲ್ಲಿ ಪಾಲ್ಗೊಳ್ಳುವರು.
ಸಂಜೆ ನಿಪ್ಪಾಣಿಯ ಮುನ್ಸಿಪಾಲ್ ಕಾಲೇಜಿನಲ್ಲಿ ನಡೆಯಲಿರುವ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ನಂತರ ಗೋಕಾಕ್‍ನಲ್ಲಿ 5.30ರಿಂದ 7.15ರವರೆಗೆ ಬಸ್ವೇಶ್ವರ ವೃತ್ತದಿಂದ ಪ್ರಾರಂಭವಾಗಲಿರುವ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ.

ನಾಳೆ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಲಿರುವ ಅವರು ಮಂಗಳವಾರ ಬೆಳಗ್ಗೆ 10.30ಕ್ಕೆ ಕೆಎಲ್‍ಇ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿ, ಬಾಗಲಕೋಟೆಯ ಬಿವಿವಿಎಸ್ ಕಾಲೇಜಿನಲ್ಲಿ ಉದ್ಯಮಿಗಳ ಜೊತೆ ಸಂವಾದ, ಮುದೋಳದ ವೀರಶೈವ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಶಕ್ತಿ ಕೇಂದ್ರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಇದೇ ವೇಳೆ ಶಾಸಕ ಗೋವಿಂದ ಕಾರಜೋಳ ಅವರು ನಿರ್ಮಿಸಿರುವ ವಸತಿಗಳ ಉದ್ಘಾಟನೆ, ಬಾದಾಮಿಯ ಶಿವಯೋಗಿ ಮಂದಿರದಲ್ಲಿ ಪರಮಪೂಜ್ಯ ಶಿವಯೋಗಿ ಸ್ವಾಮೀಜಿ ಜೊತೆ ಸಂವಾದ ಹಾಗೂ ಬ್ಯಾಡಗಿ ತಾಲ್ಲೂಕು ಕನಕ ಸಮುದಾಯ ಭವನದಲ್ಲಿ ನಡೆಯಲಿರುವ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಪಾಲ್ಗೊಳ್ಳುವರು.
ಅಮಿತ್ ಷಾ ಅವರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಬಿಜೆಪಿ ನಾಯಕರು ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ