ಕಿಕ್ಕಿರಿದು ಕಿಷ್ಕಿಂದೆಯಂತಾಗಿರುವ ಜೈಲುಗಳ ಅವ್ಯವಸ್ಥೆ: ಸುಪ್ರೀಂಕೋರ್ಟ್ ತರಾಟೆ

ನವದೆಹಲಿ, ಮಾ.31-ಕಿಕ್ಕಿರಿದು ಕಿಷ್ಕಿಂದೆಯಂತಾಗಿರುವ ಜೈಲುಗಳ ಅವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಕೈದಿಗಳ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದಕ್ಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಕಿಕ್ಕಿರಿದಿರುವ ಜೈಲಿಗಳಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಲು ಇನ್ನೆರಡು ವಾರಗಳ ಒಳಗೆ ಯೋಜನೆಗಳ ವರದಿಯನ್ನು ಸಲ್ಲಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ. ಅಲ್ಲದೇ ಇದನ್ನು ಸಲ್ಲಿಸಲು ವಿಫಲವಾದರೆ ನ್ಯಾಯಾಲಯದ ನಿಂದನೆಯಾಗುತ್ತದೆ ಎಂದು ಬಂಧೀಖಾನೆಗಳ ಮಹಾ ನಿರ್ದೇಶಕರಿಗೆ ಎಚ್ಚರಿಕೆ ನೀಡಿದೆ.
ಈ ಸಂಬಂಧ ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕುರ್ ಮತ್ತು ದೀಪಕ್ ಗುಪ್ತಾ ಅವರನ್ನು ಒಳಗೊಂಡ ಪೀಠವು ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ದೆಹಲಿ, ಪಶ್ಚಿಮ ಬಂಗಾಳ, ಪಂಜಾಬ್, ಮಧ್ಯಪ್ರದೇಶ, ಅಸ್ಸಾಂ ಮತ್ತು ಬಿಹಾರ ರಾಜ್ಯಗಳಿಗೆ ಸೂಚನೆ ನೀಡಿದೆ.
ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೈಲುಗಳಲ್ಲಿ ಸಾಮಥ್ರ್ಯಕ್ಕಿಂತ ಶೇ.150ರಷ್ಟು ಕಿಕ್ಕಿರಿದಿವೆ ಒಂದು ಪ್ರಕರಣದಲ್ಲಿ ಅದು ಶೇ.609ರಷ್ಟಿದೆ. ಈ ಜೈಲುಗಳಲ್ಲಿ ಕೈದಿಗಳ ಮಾನವ ಹಕ್ಕುಗಳ ರಕ್ಷಣೆಯನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಏಕಾಂತ ಸಜೆ, ಕಾನೂನು ಪ್ರಾತಿನಿಧ್ಯ ಹಾಗೂ ಮರಣ ದಂಡನೆಗೆ ಗುರಿಯಾದ ಕೈದಿಗಳಿಗೆ ಕುಟುಂಬದ ಸದಸ್ಯರೊಂದಿಗೆ ಭೇಟಿಗೆ ಅವಕಾಶ ಸೇರಿದಂತೆ ಅವರ ಹಕ್ಕುಗಳಿಗೆ ಕಾರಾಗೃಹಗಳು ಸ್ಪಂದಿಸಬೇಕು. ಈ ಸಂಬಂಧ ಅಮಿಕಸ್ ಕ್ಯೂರಿ (ನ್ಯಾಯಾಲಯದ ಮಿತ್ರ) ಗೌರವ ಅಗರ್‍ವಾಲ್ ಅವರು ಕೇಳಿರುವ ಕೆಲವೊಂದು ಪ್ರಶ್ನೆಗಳಿಗೆ ಬಂಧೀಖಾನೆಗಳ ಮುಖ್ಯಸ್ಥರು ಪ್ರತ್ಯುತ್ತರಗಳನ್ನು ನೀಡಬೇಕೆಂದೂ ನ್ಯಾಯಾಲಯ ಸೂಚಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ