ಕಾವೇರಿ ವಿವಾದ: ತ.ನಾಡಿಗೆ ದೇವೇಗೌಡರು ಹೇಳಿದ್ದೇನು?

ಹಾಸನ: ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆಗೆ ಪಟ್ಟು ಹಿಡಿದಿರುವ ತಮಿಳುನಾಡಿಗೆ ಮಾಜಿ ಪ್ರಧಾನಿ ದೇವೇಗೌಡರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ನೀರು ನಿರ್ವಹಣಾ ಮಂಡಳಿ ರಚನೆಗೆ ಲೋಕಸಭೆಯಲ್ಲಿ ತಮಿಳುನಾಡು ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಈಗಾಗಲೇ ಒಮ್ಮೆಗೇ ಸುಪ್ರೀಂ ಆದೇಶ ಜಾರಿ ಕಷ್ಷ ಎಂದು ಕೇಂದ್ರ ಸರ್ಕಾರ ಹೇಳಿದೆ. ರಾಜ್ಯದ ಯಾರೂ ಉದ್ರೇಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು.

ಆದಾಗ್ಯೂ ತಮಿಳುನಾಡಿನ ಮಿತ್ರರು ಉಗ್ರ ಹೋರಾಟಕ್ಕೆ ಮುಂದಾಗಿದ್ದಾರೆ. ಒಬ್ಬ ಸಂಸದರು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಸಹ ಹಾಕಿದ್ದಾರೆ. ಒಂದು ರಾಜ್ಯ ಹೀಗೆ ಹಠ ಹಿಡಿಯುವುದು ಸರಿಯಲ್ಲ. ಸೌಹಾರ್ದಯುತವಾಗಿ ಬಗೆ ಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಅಂತೆಯೇ ನಿರ್ವಹಣಾ ಮಂಡಳಿ ರಚನೆ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತೆ ಸುಪ್ರೀಂ ಕೋರ್ಟ್ ಅಭಿಪ್ರಾಯ ಕೇಳುವುದಾಗಿ ತಿಳಿಸಿದೆ. ಇದಕ್ಕೂ ಮೊದಲು ಕೇಂದ್ರ‌ ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ 4 ರಾಜ್ಯಗಳ ಸಿಎಂ ಒಳಗೊಂಡ ಸಮಿತಿ ರಚನೆ ಮಾಡಲಿ. ಅದರಲ್ಲಿ‌ ನೀರಿನ‌ ಸ್ಥಿತಿಗತಿ ಅಧ್ಯಯನ ಮಾಡುವ ತಜ್ಞರೂ ಇರಲಿ. ಅದರ‌ 5 ವರ್ಷಗಳ ಚಟುವಟಿಕೆ ನೋಡೋಣ ಎಂದರು.

ಈ ಸಮಿತಿಯ ಸಾಧಕ ಬಾಧಕ ನೋಡಿ ನಂತರ ಮುಂದಿನ ನಿರ್ಧಾರಕ್ಕೆ ಬರಲಿ. ಅದಕ್ಕೂ ಮುನ್ನ ತಮಿಳುನಾಡು ಸಂಸದರು ಸಾಯುವ ಹೇಳಿಕೆ ‌ನೀಡಬಾರದು. ಈ‌ ಸಂಬಂಧ ಕೇಂದ್ರ ಜಲಸಂಪನ್ಮೂಲ ಸಚಿವರ ಜೊತೆ ಮಾತಾಡುತ್ತೇನೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ