ಚುನಾವಣೆ ದಿನಾಂಕ ಬದಲಾವಣೆ ಮಾಡುವ ಪ್ರಸ್ತಾಪ ಆಯೋಗದ ಮುಂದಿಲ್ಲ: ಸಂಜೀವ್‍ಕುಮಾರ್

ಬೆಂಗಳೂರು, ಮಾ 28-ವಿಧಾನಸಭೆ ಚುನಾವಣೆ ದಿನಾಂಕ ಬದಲಾವಣೆ ಮಾಡುವ ಪ್ರಸ್ತಾಪ ಚುನಾವಣಾ ಆಯೋಗದ ಮುಂದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಸಾಧಕ-ಬಾಧಕ ಪರಿಶೀಲಿಸಿದ ನಂತರವೇ ಚುನಾವಣೆ ದಿನಾಂಕ ನಿಗದಿಯಾಗಿದೆ. ಪರೀಕ್ಷೆಗಳ ಮೌಲ್ಯಮಾಪನ ಸೇರಿದಂತೆ ವಿವಿಧ ಹಬ್ಬಗಳ ದಿನಾಂಕವನ್ನು ಹೊಂದಾಣಿಕೆ ಮಾಡಿಕೊಂಡೇ ಮೇ 12 ರಂದು ಚುನಾವಣೆ ನಿಗದಿ ಮಾಡಲಾಗಿದೆ.

ದಿನಾಂಕ ಬದಲಾವಣೆ ಮಾಡುವ ಬಗ್ಗೆ ನಾವು ಏನೂ ಹೇಳುವಂತಿಲ್ಲ. ಕೇಂದ್ರ ಚುನಾವಣಾ ಆಯೋಗ ನಿಗದಿ ಮಾಡಿರುವ ದಿನದಂದು ಮತದಾನ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನೀತಿ ಸಂಹಿತೆಯನ್ನು ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಸರ್ಕಾರಿ ವಾಹನಗಳ ದುರುಪಯೋಗದ ಮೇಲೆ ನಿಗಾ ವಹಿಸಲಾಗಿದೆ.

ನಿನ್ನೆ ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ವ್ಯಕ್ತಿಯೊಬ್ಬರ ಊಟದ ವ್ಯವಸ್ಥೆ ಮಾಡಲಾಗಿತ್ತು ಅದನ್ನು ತಡೆಹಿಡಿಯಲಾಯಿತು.ನಿಸರ್ಗ ರೆಸಿಡೆನ್ಸಿಯಲ್ಲಿ ಗಂಗಾನಾಯಕ್ ಜೆಇ ಅವರಿಂದ 7 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಆ ಕುರಿತು ತನಿಖೆ ನಡೆಸಲಾಗಿದೆ.
ದೇವರ ಹಿಪ್ಪರಗಿಯಲ್ಲಿ ಎ.ಎಸ್.ಪಾಟೀಲ್ ನಡಹಳ್ಳಿ ಸೀರೆ ಹಂಚುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಕೇಸು ದಾಖಲಿಸಲಾಗಿದೆ.

ನಿನ್ನೆ ರಾಜ್ಯ ಪ್ರವಾಸದ ವೇಳೆ ಅಮಿತ್ ಷಾ ಭರವಸೆ ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಆ ಬಗ್ಗೆ ದೂರು ಬಂದರೆ ಪರಿಶೀಲನೆ ನಡೆಸಲಾಗುವುದು. ಸಾರ್ವಜನಿಕರ ಹಣ ದುರುಪಯೋಗವಾಗುವ ಯಾವುದೇ ಪ್ರಕರಣವಾದರೂ ಆಯೋಗ ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂದರು.
ಗೃಹ ಸಚಿವರ (ಕೆಂಪಯ್ಯ)ಸಲಹೆಗಾರರ ಹುದ್ದೆಗೆ ಕುತ್ತು:
ಚುನಾವಣೆ ಸಂದರ್ಭದಲ್ಲಿ ಯಾವುದೇ ರಾಜಕೀಯ ಸಲಹೆಗಾರರ ಹುದ್ದೆಗೆ ಅವಕಾಶವಿಲ್ಲ. ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರನ್ನು ಹುದ್ದೆಗೆ ಯಾವ ರೀತಿ ನೇಮಕ ಮಾಡಲಾಗಿದೆ ಎಂಬುದನ್ನು ಪರಿಶೀಲಿಸಿ ಲೋಪ ಕಂಡು ಬಂದಲ್ಲಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ವಿವಿಗಳ ಕುಲಪತಿಗಳ ನೇಮಕಾತಿಗೆ ತಡೆ:
ಚುನಾವಣೆ ದಿನಾಂಕ ಘೋಷಣೆ ನಂತರ ಯಾವುದೇ ವಿವಿಗಳಿಗೆ ಕುಲಪತಿಗಳ ನೇಮಿಸುವಂತಿಲ್ಲ. ಒಂದು ವೇಳೆ ಅಂತಹ ನೇಮಕಾತಿ ನಡೆದರೆ ತಡೆಹಿಡಿಯಲಾಗುವುದು.
ಹಿಂದಿನ ದಿನಾಂಕ ನಮೂದಿಸಿ ರಾಜ್ಯ ಸರ್ಕಾರ ಹಲವಾರು ನೇಮಕಾತಿ ಮಾಡಿ ಎಂದು ಕೇಳಿ ಬಂದಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದೂರು ಬಂದರೆ ಪರಿಶೀಲಿಸುವುದಾಗಿ ಹೇಳಿದರು.

ಗುತ್ತಿಗೆ ಟೆಂಡರ್‍ಗಳನ್ನು ರಾತ್ರೋರಾತ್ರಿ ಮಂಜೂರು ಮಾಡಲಾಗಿದೆ ಎಂಬ ಹೇಳಿಕೆ ಬಗ್ಗೆಯೂ ದೂರು ಬಂದರೆ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದರು.
ಸರ್ಕಾರದ ಎಲ್ಲಾ ಜಾಹೀರಾತು ಫಲಕಗಳ ತೆರವುಗೊಳಿಸಲಾಗಿದೆ.
ಚುನಾವಣೆ ಹಾಗೂ ಮತದಾನದ ಬಗ್ಗೆ ಜಾಗೃತಿ ಫಲಕ ಎಲ್ಲೆಡೆ ಅಳವಡಿಸಿ ರಾಜ್ಯದ 33 ಚುನಾವಣಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ