ಕೊಳ್ಳೇಗಾಲದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಉಪಹಾರ ಸವಿದ ರಾಹುಲ ಗಾಂಧಿ

ಕೊಳ್ಳೇಗಾಲ.ಮಾ.25- ಕೊಳ್ಳೇಗಾಲ ಪಟ್ಟಣಕ್ಕೆ ಆಗಮಿಸಿ ರೋಡ್ ಶೋ ನಡೆಸಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಉಪ ವಿಭಾಗ ಆಸ್ಪತ್ರೆ ಮುಂಭಾಗ ನಿರ್ಮಿಸಿರುವ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಉಪಹಾರ ಸವಿದರು.

ಮೈಸೂರು-ಚಾಮರಾಜನಗರ ಜಿಲ್ಲೆಗಳಲ್ಲಿ ಜನಾಶೀರ್ವಾದಯಾತ್ರೆ ಕೈಗೊಂಡಿರುವ ರಾಹುಲ್‍ಗಾಂಧಿ ನಿನ್ನೆ ಮಧ್ಯಾಹ್ನ 2.30ಕ್ಕೆ ಚಾಮರಾಜನಗರಕ್ಕೆ ಆಗಮಿಸಿ ಬಹಿರಂಗಸಭೆಯನ್ನುದ್ದೇಶಿಸಿ ಮಾತನಾಡಿದರು. ನಂತರ ಸಂತೇಮರಳ್ಳಿ, ಯಳಂದೂರಿನಲ್ಲಿ ರೋಡ್ ಶೋ ನಡೆಸಿದರು.

ಕೊಳ್ಳೇಗಾಲ ಪಟ್ಟಣದ ಅಚ್ಗಾಳ್ ಸರ್ಕಲ್‍ನಲ್ಲಿ ಸ್ಥಳೀಯ ಶಾಸಕ ಎಸ್.ಜಯಣ್ಣ ಮತ್ತಿತರರು ಡೊಳ್ಳು ಕುಣಿತ ಸೇರಿದಂತೆ ಇನ್ನಿತರ ಕಲಾತಂಡಗಳ ಮೂಲಕ ಭವ್ಯ ಸ್ವಾಗತ ಕೋರಿದರು. ರಸ್ತೆಯುದ್ದಕ್ಕೂ ರಾಹುಲ್‍ಗಾಂಧಿ ಹಾಗೂ ಮುಖ್ಯಮಂತ್ರಿ ಪ್ರೇಕ್ಷಕರ ಕಡೆ ಕೈ ಬೀಸಿ ಹರ್ಷೋದ್ಘಾರ ಮಾಡಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್‍ಗೆ ರಾಹುಲ್‍ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಬಳಿಕ ಒಳ ಪ್ರವೇಶಿಸಿ ಬಿಸಿಯಾಗಿ ತಯಾರಾಗಿದ್ದ ಲಘು ಉಪಹಾರ ಸೇವಿಸಿದರು.

ಲೋಕಸಭಾ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಪಿ.ಸಿ.ಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ. ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್, ಚುನಾವಣಾ ಪ್ರಚಾರ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕರ್ನಾಟಕ ರಾಜ್ಯ ಉಸ್ತುವರಿ ವೇಣುಗೋಪಾಲ್, ಸಂಸದ ಧೃವನಾರಾಯಣ್, ಕೊಳ್ಳೇಗಾಲ ಕ್ಷೇತ್ರ ಶಾಸಕ ಎಸ್.ಜಯಣ್ಣ, ಸೇರಿದಂತೆ ಕಾಂಗ್ರೇಸ್ ಪಕ್ಷದ ಹಲವಾರು ಮುಖಂಡರು ಸಾಥ್ ನೀಡಿದರು. ಅಲ್ಲಿಂದ ಮಳ್ಳವಳಿ ತಾಲ್ಲೂಕಿಗೆ ಪ್ರಯಾಣ ಬೆಳೆಸಿದರು.

ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಮರಿಸ್ವಾಮಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್, ನಗರಸಭೆ ಅಧ್ಯಕ್ಷ ಶಾಂತರಾಜು, ಜಿಲ್ಲಾ ನೂಡಲ್ ಯೋಜನಾಧಿಕಾರಿ ಕೆ.ಸುರೇಶ್, ಪೌರಾಯುಕ್ತ ಡಿ.ಕೆ.ಲಿಂಗರಾಜು, ಇಂಜಿನಿಯರ್ ನಾಗೇಂದ್ರ ಹಾಗೂ ಇನ್ನಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ