ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗೆ ದಾಖಲಾಗಿದ್ದ ಹಾಸನ ಜಿಲ್ಲೆ ಬೇಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವೈ.ಎನ್.ರುದ್ರೇಶ್ ಗೌಡ ಇಂದು ವಿಧಿವಶರಾಗಿದ್ದಾರೆ

ಬೆಂಗಳೂರು, ಮಾ.24- ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗೆ ದಾಖಲಾಗಿದ್ದ ಹಾಸನ ಜಿಲ್ಲೆ ಬೇಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವೈ.ಎನ್.ರುದ್ರೇಶ್ ಗೌಡ ಇಂದು ವಿಧಿವಶರಾಗಿದ್ದಾರೆ.

ಮೃತರು ಪತ್ನಿ, ಪುತ್ರಿ ಸೇರಿದಂತೆ ಅಪಾರ ಸಂಖ್ಯೆ ಕಾರ್ಯಕರ್ತರನ್ನು ಅಗಲಿದ್ದಾರೆ.

ನಿನ್ನೆ ರಾಜ್ಯಸಭಾ ಚುನಾವಣೆ ವೇಳೆ ತೀವ್ರ ಹೃದಯಾಘತಕ್ಕೆ ಒಳಗಾಗಿದ್ದ ರುದ್ರೇಗೌಡ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ಅವರನ್ನು ತಜ್ಞರ ಒಂದು ತಂಡ ಉಳಿಸಿಕೊಳ್ಳಲು ನಿರಂತರ ಪ್ರಯತ್ನ ಮಾಡಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಗ್ಗೆ 11.15ಕ್ಕೆ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕಳೆದ ನಾಲ್ಕು ವರ್ಷಗಳಿಂದ ರುದ್ರೇಶ್ ಗೌಡ ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಿದ್ದರು. ಕಿಡ್ನಿ ಸಮಸ್ಯೆ, ಕಾಲು ಊನಕ್ಕೆ ತುತ್ತಾಗಿದ್ದರು. ವಿದೇಶದಲ್ಲೂ ಚಿಕಿತ್ಸೆ ಪಡೆದಿದ್ದರು. ಆದರೆ ಅವರ ಒಂದು ಕಾಲು ಸಂಪೂರ್ಣವಾಗಿ ಸ್ವಾಧೀನ ಕಳೆದುಕೊಂಡಿದ್ದರಿಂದ ಸಹಜವಾಗಿ ಓಡಾಡುವ ಸ್ಥಿತಿಯಲ್ಲಿ ಇರಲಿಲ್ಲ.
ಇಂತಹ ಸ್ಥಿತಿಯಲ್ಲೇ ನಿನ್ನೆ ಅವರು ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಸಲು ಬಂದಾಗ ಲಘು ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಿನ್ನೆ ಸಂಜೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದರು.
ಮೂಲತಃ ಜನತಾ ಪರಿವಾರದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ರುದ್ರೇಶ್‍ಗೌಡ ಒಂದು ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸತ್‍ಗೆ ಆಯ್ಕೆಯಾಗಿದ್ದರು. ಬಳಿಕ ಕಾಂಗ್ರೆಸ್‍ಗೆ ಸೇರ್ಪಡೆಯಾಗಿ ಬೇಲೂರು ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಸಂಜೆ ತವರಿಗೆ :
ಮೃತ ರುದ್ರೇಶ್ ಗೌಡ ಅವರ ಪಾರ್ಥೀವ ಶರೀರ ಇಂದು ಸಂಜೆ ಹಾಸನ ಜಿಲ್ಲೆಯ ಬೇಲೂರಿಗೆ ಕೊಂಡೊಯ್ಯಲಾಗುವುದು. ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು.
ನಾಳೆ ಬೆಳಗ್ಗೆ ಅವರ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ:
ಶಾಸಕ ವೈ.ಎನ್.ರುದ್ರೇಶ್‍ಗೌಡ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ನೀರವ ಮೌನ: ಶಾಸಕ ರುದ್ರೇಶ್ ಗೌಡ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನೀರವ ಮೌನ ಆವರಿಸಿತ್ತು. ಬಂಧುಗಳು, ಸಂಬಂಧಿಕರು, ಕುಟುಂಬದ ಸದಸ್ಯರು, ಹಿತೈಷಿಗಳು, ವಿವಿಧ ಪಕ್ಷಗಳ ಕಾರ್ಯಕರ್ತರು ಅವರ ನಾಯಕತ್ವದ ಗುಣವನ್ನು ಸ್ಮರಿಸಿದರು.

ಮೃತರ ಗೌರವಾರ್ಥವಾಗಿ ಬೇಲೂರಿನ ಕೆಲವು ಕಡೆ ಅಂಗಡಿಗಳು, ಹೊಟೆಲ್, ಸಿನಿಮಾ ಮಂದಿರಗಳು ಮುಚ್ಚಿ ಅಗಲಿದ ನಾಯಕರನಿಗೆ ಸಂತಾಪ ಸೂಚಿಸಲಾಯಿತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ