ಇಬ್ಬರು ಸಹೋದರರು ಸೇರಿ ನಾಲ್ವರು ದರೋಡೆಕೋರರನ್ನು ಸುಬ್ರಹ್ಮಣ್ಯ ನಗರ ಠಾಣೆ ಪೆÇಲೀಸರು ಬಂಧಿಸಿ 1 ಕೋಟಿ ರೂ. ಮೌಲ್ಯದ ಮಾಲನ್ನು ವಶ

ಬೆಂಗಳೂರು, ಮಾ.23- ಇಂಗ್ಲಿಷ್ ಸಿನಿಮಾ ಹಾಗೂ ಅಪರಾಧ ಕಥೆ ಆಧರಿಸಿದಂತಹ ಚಿತ್ರಗಳನ್ನು ವೀಕ್ಷಿಸಿ ಅದರಿಂದ ಪ್ರೇರೇಪಣೆಗೊಂಡು ರಾಜಾಜಿನಗರದ ಚೆಮ್ಮನೂರ್ ಜ್ಯುವೆಲರ್ಸ್ ದರೋಡೆಗೆ ಸಂಚು ರೂಪಿಸಿ ಪೆಟ್ರೋಲ್ ಬಾಂಬ್ ಎಸೆದು ಚಿನ್ನಾಭರಣ ದೋಚಲು ವಿಫಲ ಯತ್ನ ನಡೆಸಿ ಪರಾರಿಯಾಗಿದ್ದ ಇಬ್ಬರು ಸಹೋದರರು ಸೇರಿ ನಾಲ್ವರು ದರೋಡೆಕೋರರನ್ನು ಉತ್ತರ ವಿಭಾಗದ ಸುಬ್ರಹ್ಮಣ್ಯ ನಗರ ಠಾಣೆ ಪೆÇಲೀಸರು ಬಂಧಿಸಿ 1 ಕೋಟಿ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೆÇಲೀಸ್ ಆಯುಕ್ತ ಟಿ.ಸುನಿಲ್‍ಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಜ್ಯುವೆಲರ್ಸ್ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮ್ರಾಟ್ ಅಲಿಯಾಸ್ ಶಿವು (30) ಮತ್ತು ಈತನ ಸಹೋದರ ಶಂಕರ್ (26), ನಿವೇಶ್‍ಕುಮಾರ್ (29), ಜಗದೀಶ್ (34) ಎಂಬುವವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳ ಪೈಕಿ ಜಗದೀಶ್ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯವನಾಗಿದ್ದು, ಚೆನ್ನೈನಲ್ಲಿ ಬೆಳ್ಳಿ ಕರಗಿಸುವ ಅಂಗಡಿಯನ್ನು ನಡೆಸುತ್ತಿದ್ದನು ಎಂದು ವಿವರಿಸಿದರು.

ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ತಂಡ ವಿವಿಧ ಮಾಹಿತಿ ಕಲೆ ಹಾಕಿ ದೇವನಹಳ್ಳಿಯ ರೈಲ್ವೆ ಟ್ರ್ಯಾಕ್ ಬಳಿ ಆರೋಪಿಗಳನ್ನು ಬಂಧಿಸಿ 43 ಲಕ್ಷ ಮೌಲ್ಯದ ಚಿನ್ನಾಭರಣ, 57 ಲಕ್ಷ ಬೆಲೆಯ 4 ನಾಲ್ಕು ಚಕ್ರದ ವಾಹನಗಳು, 4 ಬೈಕ್‍ಗಳು, ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಘಟನೆ ಹಿನ್ನೆಲೆ: ಫೆ.19ರಂದು ಸಂಜೆ ರಾಜಾಜಿನಗರ 1ನೆ ಬ್ಲಾಕ್‍ನಲ್ಲಿರುವ ಚೆಮ್ಮನೂರ್ ಜ್ಯುವೆಲರ್ಸ್ ಅಂಗಡಿಯ ದರೋಡೆಗಾಗಿ ನಾಲ್ವರು ದರೋಡೆಕೋರರು ಬಂದಿದ್ದು, ಈ ವೇಳೆ ಒಬ್ಬ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ ಪೆಟ್ರೋಲ್ ಬಾಂಬ್ ಎಸೆದು ಅಂಗಡಿ ಒಳಗೆ ಪ್ರವೇಶಿಸಲು ಯತ್ನಿಸಿ ದರೋಡೆ ನಡೆಸಲು ಮುಂದಾಗಿದ್ದರು.

ಈ ಸಂದರ್ಭದಲ್ಲಿ ಅದೇ ಸ್ಥಳದಲ್ಲಿದ್ದ ಮತ್ತೊಬ್ಬ ಸೆಕ್ಯೂರಿಟಿ ಗಾರ್ಡ್ ಸಮಯ ಪ್ರಜ್ಞೆಯಿಂದ ತನ್ನ ಬಳಿ ಇದ್ದ ರಿವಾಲ್ವರ್‍ನಿಂದ ಗುಂಡು ಹಾರಿಸಿದ್ದರಿಂದ ದರೋಡೆಕೋರರು ಅಲ್ಲಿಂದ ಪರಾರಿಯಾಗಿದ್ದರು.

ಈ ಬಗ್ಗೆ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದರೋಡೆ ಯತ್ನ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ತನಿಖಾ ತಂಡಕ್ಕೆ ಹಲವು ಮಾಹಿತಿಗಳು ಲಭ್ಯವಾದವು. ಮಾಹಿತಿಯ ಜಾಡು ಹಿಡಿದ ಈ ತಂಡ ಕೊನೆಗೂ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಈ ಹಿಂದೆ 2011ನೆ ಸಾಲಿನಿಂದ 2017ನೆ ಸಾಲಿನವರೆಗೂ ಚೆಮ್ಮನೂರ್ ಜ್ಯುವೆಲರ್ಸ್‍ನಲ್ಲಿ ನಡೆದ ಮೂರು ದರೋಡೆ ಪ್ರಕರಣಗಳು ಹಾಗೂ 2011ನೆ ಸಾಲಿನಲ್ಲಿ ರಾಮಮೂರ್ತಿ ನಗರದಲ್ಲಿನ ಸಂತೋಷ್ ಜ್ಯುವೆಲರ್ಸ್‍ನಲ್ಲಿ ನಡೆದ ಒಂದು ದರೋಡೆ ಪ್ರಕರಣ ಮತ್ತು ಸಾಂಗ್ಲಿ, ಮಹಾರಾಷ್ಟ್ರ ಹಾಗೂ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದ ಎರಡು ಬೈಕ್ ದರೋಡೆ ಪ್ರಕರಣಗಳು ಆರೋಪಿಗಳ ಬಂಧನದಿಂದ ಬೆಳಕಿಗೆ ಬಂದಿವೆ.
ಸಹೋದರರು: ಆರೋಪಿಗಳಾದ ಶಿವು ಮತ್ತು ಶಂಕರ್ ಸಹೋದರರಾಗಿದ್ದು, ಮಧ್ಯಮ ವರ್ಗದ ಜ್ಯೋತಿಷಿಯ ಮಕ್ಕಳು. ಇವರು ಕೇವಲ 23 ಹಾಗೂ 19ರ ವಯಸ್ಸಿನಲ್ಲೇ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು.

ಆರೋಪಿ ಶಿವು 8ನೆ ತರಗತಿಯಲ್ಲಿ ಅನುತ್ತೀರ್ಣಗೊಂಡಿದ್ದು, ಶಂಕರ್ ಬಿಕಾಂ ವ್ಯಾಸಂಗ ಮಾಡುತ್ತಿದ್ದನು. ಮೋಜು ಹಾಗೂ ಅದ್ಧೂರಿ ಜೀವನಕ್ಕೆ ಒಗ್ಗಿಕೊಂಡಿದ್ದ ಇವರಿಬ್ಬರು ಸುಲಭವಾಗಿ ಹಣ ಗಳಿಸುವ ಆಸೆಯಿಂದ ಚಿನ್ನಾಭರಣ ಅಂಗಡಿಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು.

ಸಹೋದರರಿಬ್ಬರೂ ಸೇರಿ 2011-12ರ ವರೆಗೆ ರಾಮಮೂರ್ತಿನಗರ ವ್ಯಾಪ್ತಿಯ ಸಂತೋಷ್ ಆಭರಣ ಅಂಗಡಿ, ಪೀಣ್ಯದ ಚೆಮ್ಮನೂರ್ ಆಭರಣ ಅಂಗಡಿ ಮತ್ತು ಸುಬ್ರಹ್ಮಣ್ಯ ನಗರ ವ್ಯಾಪ್ತಿಯ ಚೆಮ್ಮನೂರ್ ಆಭರಣ ಅಂಗಡಿಗಳಲ್ಲಿ ದರೋಡೆ ನಡೆಸಿದ್ದಾರೆ.

ದರೋಡೆ ವೇಳೆ 8 ಕೆಜಿ ಚಿನ್ನಾಭರಣವನ್ನು ಕದ್ದೊಯ್ದಿದ್ದು, ಈ ಮಾಲನ್ನು ಆರೋಪಿ ಶಿವು ಶ್ರೀಲಂಕಾ ದೇಶದಲ್ಲಿ ಮೊದಲು ವಿಲೇವಾರಿ ಮಾಡಿದ್ದು, ನಂತರ ಜಗದೀಶ್‍ನ ಸಹಾಯದಿಂದ ಉಳಿದ ಮಾಲನ್ನು ಚೆನ್ನೈನಲ್ಲಿ ವಿಲೇವಾರಿ ಮಾಡಿದ್ದನು.

ಇದರಿಂದ ಬಂದ ಹಣದಲ್ಲಿ ಆರೋಪಿ ಶಿವು ಫಾರ್ಚುನರ್ ಮತ್ತು ಐ20 ಕಾರುಗಳನ್ನು ಖರೀದಿಸಿದ್ದಲ್ಲದೆ, ಯಲಹಂಕದಲ್ಲಿ ಆರ್‍ಎಸ್ ಬಿಜಿನೆಸ್ ಸಲ್ಯೂಷನ್ ಎಂಬ ರಿಯಲ್ ಎಸ್ಟೇಟ್ ವ್ಯವಹಾರ ಪ್ರಾರಂಭಿಸಲು ಮುಂದಾಗಿ ಅದರಲ್ಲಿ ವಿಫಲನಾಗಿದ್ದನು.

ಈತನ ತಮ್ಮ ಶಂಕರ್ ಬಿಕಾಂ ಪದವಿ ಪೂರೈಸಿದ ನಂತರ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಯುಪಿಎಸ್‍ಸಿ ಪರೀಕ್ಷೆಯ ತರಬೇತಿಗೆ ಸೇರಿಕೊಂಡಿದ್ದು, ಇಲ್ಲಿ ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಲಿಲ್ಲ.

ಗುಂಡು ನಿರೋಧಕ ರಕ್ಷಾ ಕವಚ ಹೊಂದಿದ್ದರು: ಅಪರಾಧ ಪ್ರಕರಣಗಳನ್ನು ನಡೆಸಿ ಸುಲಭವಾಗಿ ಗಳಿಸಿದ ಹಣ ಬೇಗನೆ ಖರ್ಚಾಗುತ್ತಿದ್ದುದರಿಂದ ಪುನಃ 2016ನೆ ಸಾಲಿನಲ್ಲಿ ಆರೋಪಿ ಶಿವುಗೆ ಮತ್ತೆ ಹಣ ಗಳಿಸುವ ಬಯಕೆ ಹೊಂದಿ ಈ ಹಿಂದೆ ನಡೆಸಿದ ಅಪರಾಧ ಪ್ರಕರಣಗಳಲ್ಲಿ ಪೆÇಲೀಸರ ಕೈಗೆ ಸಿಗದ ಕಾರಣ ಪ್ರಚೋದಿತನಾಗಿ ಹಾಗೂ ತನ್ನ ಅನುಭವದಿಂದ ಮತ್ತೆ ಇದೇ ಕೃತ್ಯಕ್ಕೆ ಇಳಿದು ಕಬ್ಬಿಣದ ರಾಡು ಅಥವಾ ಪೆಪ್ಪರ್ ಸ್ಪ್ರೇಗಳಂತಹ ವಸ್ತುಗಳ ಬದಲಾಗಿ ಪೆಟ್ರೋಲ್ ಬಾಂಬ್ ಮತ್ತು ಗುಂಡು ನಿರೋಧಕ ರಕ್ಷಾ ಕವಚ ಬಳಸಿ ದರೋಡೆ ಮಾಡಲು ಪ್ರಾರಂಭಿಸಿದ್ದನು.

2017ನೆ ಸಾಲಿನಲ್ಲಿ ದೇವನಹಳ್ಳಿ ಹೊರವಲಯದ ವಿನಾಯಕ ನಗರದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡ ಶಿವು ಈತನಿಗೆ ಈ ಹಿಂದೆ ಕದ್ದ ಮಾಲನ್ನು ವಿಲೇವಾರಿ ಮಾಡಲು ಸಹಾಯ ಮಾಡಿದ್ದ ಜಗದೀಶ್ ಹಾಗೂ ವೈಟ್‍ಫೀಲ್ಡ್‍ನಲ್ಲಿನ ಎಚ್‍ಪಿ ಇಂಕ್ ಎಂಬ ಕಂಪೆನಿಯಲ್ಲಿ ಫೆಸಿಲಿಟಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಕಾಂ ಪದವೀಧರ ನಿವೇಶ್‍ಕುಮಾರ್‍ನನ್ನು ತನ್ನೊಂದಿಗೆ ಸೇರಿಸಿಕೊಂಡು ತಂಡವೊಂದನ್ನು ರಚಿಸಿದ್ದರು.
ಆರೋಪಿ ಶಿವು ದರೋಡೆಯ ಮಾಸ್ಟರ್ ಮೈಂಡ್ ಆಗಿದ್ದು, ದೊಡ್ಡ ದೊಡ್ಡ ಆಭರಣ ಮಳಿಗೆಗಳನ್ನು ದರೋಡೆ ಮಾಡುವ ಸಾಮಥ್ರ್ಯ ಹೊಂದಿರುವುದನ್ನು ತಿಳಿದ ಜಗದೀಶ್ ಸಕ್ರಿಯವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದನು.

ಆರೋಪಿ ನಿವೇಶ್ ಸಹ ಹಣದ ಅವಶ್ಯಕತೆ ಜತೆಗೆ ಸುಲಭವಾಗಿ ಹಣ ಗಳಿಸುವ ದುರಾಸೆ ಹೊಂದಿ ಶಿವು ಜತೆ ಸೇರಿ ಕದ್ದ ಮಾಲುಗಳನ್ನು ವಿಲೇವಾರಿ ಮಾಡುತ್ತಿದ್ದನು.
ಪಿಸ್ತೂಲ್ ಖರೀದಿಗೆ ವಿಫಲ ಯತ್ನ: ಆರೋಪಿ ಶಿವು ದೊಡ್ಡ ಮಟ್ಟದಲ್ಲಿ ಲೂಟಿ ಮಾಡಿ ಹಣ ಗಳಿಸುವ ಉದ್ದೇಶ ಹೊಂದಿದ್ದು, ಇದಕ್ಕಾಗಿ ಉತ್ತರ ಪ್ರದೇಶದಲ್ಲಿ ತಯಾರಾಗುವ ನಾಡ ಪಿಸ್ತೂಲನ್ನು ಕಳೆದ ಸಾಲಿನಲ್ಲಿ ಖರೀದಿಸಲು ಪ್ರಯತ್ನಿಸಿದ್ದು ವಿಫಲನಾಗಿದ್ದನು.

ಆಭರಣ ಅಂಗಡಿಗಳಲ್ಲಿ ಕರ್ತವ್ಯ ನಿರ್ವಹಿಸುವ ಸೆಕ್ಯೂರಿಟಿ ಗಾರ್ಡ್‍ಗಳು ಆರಿಸುವ ಗುಂಡುಗಳಿಂದ ಬಚಾವ್ ಆಗಲು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ತನ್ನ ಅವಶ್ಯಕತೆಗನುಗುಣವಾಗಿ ಸ್ಥಳೀಯರಿಂದ ತಯಾರಿಸಲಾಗಿದ್ದ ಗುಂಡು ನಿರೋಧಕ ರಕ್ಷಾ ಕವಚ ಖರೀದಿಸಿದ್ದನು.

ಅಲ್ಲದೆ, ಪೆಟ್ರೋಲ್‍ಬಾಂಬ್ ತಯಾರಿಸಲು ಸಹ ಈತ ಪರಿಣಿತಿ ಹೊಂದಿದ್ದನು. ಕೃತ್ಯ ಎಸಗುವ ಸ್ಥಳದಲ್ಲಿ ಪಟಾಕಿಗಳನ್ನು ಬಳಸಿ ಸಾರ್ವಜನಿಕರಲ್ಲಿ ಗಾಬರಿ ಉಂಟುಮಾಡುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದನು.

ಚಿನ್ನಾಭರಣ ಅಂಗಡಿಗಳಲ್ಲಿ ದರೋಡೆ ನಡೆಸುವ ಸಲುವಾಗಿ ಮಹಾರಾಷ್ಟ್ರದ ಸಾಂಗ್ಲಿಯಿಂದ ಒಂದು ಬೈಕ್ ಮತ್ತು ಗೌರಿಬಿದನೂರಿನ ಹೊರವಲಯದ ಸ್ಥಳದಲ್ಲಿ ಮತ್ತೊಂದು ಬೈಕನ್ನು ದರೋಡೆ ಮಾಡಿದ್ದರು.

ಕಳೆದ ಜುಲೈನಲ್ಲಿ ಆರೋಪಿಗಳು ಸೇರಿಕೊಂಡು ಚಿಕ್ಕಬಳ್ಳಾಪುರದಲ್ಲಿರುವ ಚೆಮ್ಮನೂರ್ ಆಭರಣ ಅಂಗಡಿ ಮೇಲೆ ದಾಳಿ ಮಾಡಿ ಸೆಕ್ಯೂರಿಟಿ ಗಾರ್ಡ್‍ಗೆ ಆಯುಧದಿಂದ ಇರಿದು 600 ಗ್ರಾಂಗಿಂತ ಹೆಚ್ಚು ಚಿನ್ನಾಭರಣ ಹಾಗೂ ಸೆಕ್ಯೂರಿಟಿ ಗಾರ್ಡ್ ಬಳಿಯಿದ್ದ ರೈಫಲ್‍ನೊಂದಿಗೆ ಪರಾರಿಯಾಗಿದ್ದರು ಎಂದು ಸುನಿಲ್‍ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ದರೋಡೆಕೋರರನ್ನು ಬಂಧಿಸಿದ ತಂಡವನ್ನು ನಗರ ಪೆÇಲೀಸ್ ಆಯುಕ್ತರು ಶ್ಲಾಘಿಸಿ ತಂಡಕ್ಕೆ ಸೂಕ್ತ ಬಹುಮಾನ ಘೋಷಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ