ಜೆಡಿಎಸ್ ಪಕ್ಷದ ಅಭ್ಯರ್ಥಿ ಬಿ.ಎಂ.ಫಾರೂಕ್ ಅವರ ಸೋಲಿಗೆ ಕಾರಣವಾಗಿದ್ದ ಜೆಡಿಎಸ್‍ನ ಏಳು ಬಂಡಾಯ ಶಾಸಕರ ವಿರುದ್ಧ ಬಿಜೆಪಿ ಘಟಕ ಆಗ್ರಹ

ಬೆಂಗಳೂರು, ಮಾ.22-ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ 2016ರಲ್ಲಿ ನಡೆದ ಚುನಾವಣೆಯಲ್ಲಿ ಅಡ್ಡಮತದಾನದ ಮೂಲಕ ಜೆಡಿಎಸ್ ಪಕ್ಷದ ಅಭ್ಯರ್ಥಿ ಬಿ.ಎಂ.ಫಾರೂಕ್ ಅವರ ಸೋಲಿಗೆ ಕಾರಣವಾಗಿದ್ದ ಜೆಡಿಎಸ್‍ನ ಏಳು ಬಂಡಾಯ ಶಾಸಕರ ವಿರುದ್ಧ ತೆಗೆದುಕೊಳ್ಳುವ ಕ್ರಮವನ್ನೇ ಶಾಸಕ ಕೆ.ಗೋಪಾಲಯ್ಯ ವಿರುದ್ಧವೂ ತೆಗೆದುಕೊಳ್ಳಬೇಕೆಂದು ಮಹಾಲಕ್ಷ್ಮಿ ಲೇಔಟ್ ಬಿಜೆಪಿ ಘಟಕ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಹರೀಶ್ ಮಾತನಾಡಿ, ಈಗಾಗಲೇ ಜೆಡಿಎಸ್‍ನ ಏಳು ಬಂಡಾಯ ಶಾಸಕರು ಕಳೆದ ಬಾರಿ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿರುದ್ಧ ಅಡ್ಡಮತದಾನ ಮಾಡಿದ ಕಾರಣಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡರು ಕ್ರಮಕೈಗೊಳ್ಳುವಂತೆ ವಿಧಾನಸಭಾಧ್ಯಕ್ಷರಿಗೆ ದೂರು ನೀಡಿದ್ದರು.

ದೂರನ್ನು ಪರಿಗಣಿಸಿದ ವಿಧಾನಸಭಾಧ್ಯಕ್ಷರು ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿದ್ದಾರೆ.

ಏಳು ಮಂದಿ ಬಂಡಾಯ ಶಾಸಕರ ವಿರುದ್ಧ ಹೊರಬರುವ ತೀರ್ಪು ಆಧರಿಸಿ ಗೋಪಾಲಯ್ಯ ವಿರುದ್ಧವೂ ಕ್ರಮಕೈಗೊಳ್ಳಬೇಕು.

ಗೋಪಾಲಯ್ಯ ಅವರೂ ಸಹ ಹಣದ ಆಸೆಗೆ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮನ್ನು ಮಾರಿಕೊಂಡಿದ್ದಾರೆ. ಜೆಡಿಎಸ್ ಮುಖಂಡರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಅವರು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಂ.ಪ್ರಸನ್ನ, ಎಂ.ನಾಗರಾಜ್, ಕೋದಂಡರಾಮು, ಶಿವಾನಂದ, ನರಸಿಂಹ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ