ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ: ರಾಜ್ಯದ ಕರಾವಳಿ,ದಕ್ಷಿಣ ಒಳನಾಡಿನಲ್ಲಿ ಮಳೆ

ಬೆಂಗಳೂರು,ಮಾ.16-ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಭಾಗಶಃ ವ್ಯಾಪಕ ಪ್ರಮಾಣದ ಮಳೆಯಾಗಿದ್ದು , ಯುಗಾದಿ ಹಬ್ಬದವರೆಗೂ ಇದೇ ರೀತಿ ಮಳೆ ಮುಂದುವರೆಯುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ದಿನಗಳಿಂದ ಪ್ರಬಲವಾಗಿದ್ದ ವಾಯುಭಾರ ಕುಸಿತ ದುರ್ಬಲಗೊಳ್ಳುತ್ತಿದೆ. ಆದರೂ ಇನ್ನೆರಡು ದಿನಗಳ ಕಾಲ ಹೆಚ್ಚುಕಡಿಮೆ ಇದೇ ರೀತಿ ಮಳೆಯಾಗಲಿದೆ ಎಂದರು.
ನಿನ್ನೆ ಸಂಜೆ ಹಾಗೂ ರಾತ್ರಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಹಾಗೂ ಮಲೆನಾಡಿನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲೂ ಭಾಗಶಃ ವ್ಯಾಪಕ ಪ್ರಮಾಣದ ಮಳೆಯಾಗಿದೆ.
ಕೆಲವೆಡೆ ಬಲವದ ಮೇಲ್ಮೈ ಗಾಳಿ, ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲೂ ಕೂಡ ವ್ಯಾಪಕ ಪ್ರಮಾಣದ ಮಳೆಯಾಗಿದೆ . ಕೆಲವೆಡೆ ಹಗುರು ಮತ್ತೆ ಕೆಲವೆಡೆ ಸಾಧಾರಣ ಹಾಗೂ ಗರಿಷ್ಠ 41.5 ಮಿ.ಮೀವರೆಗೂ ಭಾರೀ ಮಳೆಯಾದ ವರದಿಯಾಗಿದೆ ಎಂದು ತಿಳಿಸಿದರು.
ಅಂಜನಪುರ 29, ಕೋಣನಕುಂಟೆ 23.5 , ಉತ್ತರಹಳ್ಳಿ 32, ಬಿಳೇಕಹಳ್ಳಿ 12.5, ಬೇಗೂರು 23.5, ಗೊಟ್ಟಿಗೆರೆ 22.5, ಪೀಣ್ಯ ಕೈಗಾರಿಕಾ ಪ್ರದೇಶ 16, ಶೆಟ್ಟಿಹಳ್ಳಿ 16, ವಿದ್ಯಾರಣ್ಯಾಪುರ 16.5, ಯಲಹಂಕ 10.5, ಬ್ಯಾಟರಾಯನಪುರ 8.5, ಅಟ್ಟೂರು 23.5, ದಯಾನಂದನಗರ 9.5, ನಾಗರಬಾವಿ 18, ಅಗ್ರಹಾರ ದಾಸರಹಳ್ಳಿ 10, ಮಾರಪ್ಪನಪಾಳ್ಯ 9, ನಾಗಪುರ 15, ನಂದಿನಿಲೇಔಟ್ 13.5, ರಾಜಾಜಿನಗರ 11.5, ಕಾಟನ್‍ಪೇಟೆ 12.5, ಬಸವನಗುಡಿ 17.5, ಸಾರಕ್ಕಿ 19, ಕುಮಾರಸ್ವಾಮಿ ಲೇಔಟ್ 31, ಹಂಪಿನಗರ 13.5, ಬಿಟಿಎಂ ಲೇಔಟ್ 10, ವಿವಿಪುರ 10, ಗಾಳಿ ಆಂಜನೇಯ ದೇವಾಲಯ 20.5, ವಿದ್ಯಾಪೀಠ 23.5, ರಾಜರಾಜೇಶ್ವರಿ 41.5, ಹೆಮ್ಮಿಗೆಪುರ 38.5, ಹೇರೋಹಳ್ಳಿ 14.5 ಮಿ.ಮೀನಷ್ಟು ಮಳೆಯಾಗಿರುವುದು ವರದಿಯಾಗಿದೆ ಎಂದು ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ