ಕರ್ನಾಟಕ ರಾಕ್ಷಸ ರಾಜ್ಯವಾಗಿದೆ. ರಾಮಲಿಂಗಾರೆಡ್ಡಿ ನೆಪಮಾತ್ರಕ್ಕೆ ಗೃಹ ಸಚಿವರಾಗಿದ್ದಾರೆ. ಪ್ರತಿಪಕ್ಷದ ನಾಯಕ ಜಗದೀಶ್‍ಶೆಟ್ಟರ್ ಆರೋಪ

ಬೆಂಗಳೂರು, ಮಾ.12- ಕರ್ನಾಟಕ ರಾಕ್ಷಸ ರಾಜ್ಯವಾಗಿದೆ. ರಾಮಲಿಂಗಾರೆಡ್ಡಿ ನೆಪಮಾತ್ರಕ್ಕೆ ಗೃಹ ಸಚಿವರಾಗಿದ್ದಾರೆ. ಕೆಂಪಯ್ಯನಂತಹವರ ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿದೆ. ಭ್ರಷ್ಟರಿಗೆ ಹೆಚ್ಚಿನ ರಕ್ಷಣೆ ಸಿಗುತ್ತಿದೆ ಎಂದು ಪ್ರತಿಪಕ್ಷದ ನಾಯಕ ಜಗದೀಶ್‍ಶೆಟ್ಟರ್ ಆರೋಪಿಸಿದರು.
ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ರಾಜೀವ್‍ಚಂದ್ರಶೇಖರ್ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಂತರ, ರಾಜ್ಯದಲ್ಲಿ ಅರಾಜಕತೆ ಉಂಟಾಗಿದೆ. ದುರಾಡಳಿತವಿದೆ, ಪ್ರಾಮಾಣಿಕರಿಗೆ ರಕ್ಷಣೆ ಇಲ್ಲದಂತಾಗಿದೆ, ಭ್ರಷ್ಟರನ್ನು ರಕ್ಷಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಮುಕ್ತ ವಾತಾವರಣದಲ್ಲಿ ಕೆಲಸ ಮಾಡಲಾಗುತ್ತಿಲ್ಲ. ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿ ಆರ್.ಪಿ.ಶರ್ಮಾ ಪತ್ರ ಬರೆದಿದ್ದಾರೆ. ಇದು ರಾಜ್ಯ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಹೊಣೆ ಮಾಡಿ ಎಸಿಪಿ ಮಂಜುನಾಥ್‍ರನ್ನು ವರ್ಗಾವಣೆ ಮಾಡಲಾಗಿತ್ತು. ಈಗ ಮತ್ತೆ ಅದೇ ಜಾಗಕ್ಕೆ ಮಂಜುನಾಥ್ ಅವರನ್ನು ಮರು ನಿಯುಕ್ತಿ ಮಾಡಲಾಗಿದೆ. ಮೊಹಮ್ಮದ್ ನಲಪಾಡ್‍ಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಮೊದಲೇ ಎಸಿಪಿಯನ್ನು ಮರು ನಿಯುಕ್ತಿ ಮಾಡಿರುವುದಕ್ಕೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಪೆÇಲೀಸರು ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಆಗುತ್ತಿಲ್ಲ. ಈಗ ಆರ್.ಪಿ.ಶರ್ಮಾ ಅವರ ಪತ್ರ ವಾಸ್ತವ ಚಿತ್ರಣವನ್ನು ಬಯಲು ಮಾಡಿದೆ ಎಂದು ಹೇಳಿದರು.
ಈ ಸರ್ಕಾರ ಲೋಕಾಯುಕ್ತ ಸಂಸ್ಥೆಯ ಹಲ್ಲು ಕಿತ್ತಿದ್ದು, ಈಗ ಲೋಕಾಯುಕ್ತರ ಮೇಲೆಯೇ ಕೊಲೆಯತ್ನ ನಡೆದಿದೆ. ಒಟ್ಟಾರೆ ಲೋಕಾಯುಕ್ತ ಸಂಸ್ಥೆಯನ್ನು ಕೊಂದಿದ್ದೇ ಕಾಂಗ್ರೆಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಇಂತಹ ಮೊಂಡು ಸರ್ಕಾರವನ್ನು ನಾನು ರಾಜಕೀಯ ಇತಿಹಾಸದಲ್ಲೇ ನೊಡಿಲ್ಲ. ಜನ ಸರ್ಕಾರಕ್ಕೆ ತಕ್ಕಪಾಠ ಕಲಿಸುತ್ತಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ